×
Ad

2022ರಲ್ಲಿ ಟ್ರಂಪ್ ಅಧ್ಯಕ್ಷರಾಗಿದ್ದರೆ ಉಕ್ರೇನ್ ಯುದ್ಧ ಆರಂಭವಾಗುತ್ತಿರಲಿಲ್ಲ: ಪುಟಿನ್

Update: 2025-08-16 22:21 IST

ವ್ಲಾದಿಮಿರ್ ಪುಟಿನ್ ಮತ್ತು ಡೊನಾಲ್ಡ್ ಟ್ರಂಪ್|PC : NDTV

ಅಲಾಸ್ಕ, ಆ.16: 2022ರಲ್ಲಿ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿದ್ದರೆ ಉಕ್ರೇನ್‌ ನಲ್ಲಿ ಸಂಘರ್ಷ ಆರಂಭವಾಗುತ್ತಿರಲಿಲ್ಲ. ಉಕ್ರೇನ್‌ ಗೆ ಬೆಂಬಲ ನೀಡುವುದರಿಂದ ಪರಿಸ್ಥಿತಿ ಉಲ್ಬಣಿಸಬಹುದು ಮತ್ತು ಮಿಲಿಟರಿ ಕ್ರಮಗಳ ರೀತಿಯ ಗಂಭೀರ ಪರಿಣಾಮಕ್ಕೆ ಕಾರಣವಾಗಬಹುದು ಎಂದು ಆಗ ಅಮೆರಿಕದ ಅಧ್ಯಕ್ಷರಾಗಿದ್ದ ಜೋ ಬೈಡನ್‌ ಗೆ ಎಚ್ಚರಿಕೆ ನೀಡಿದ್ದೆ' ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.

ಅಲಾಸ್ಕದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್‍ ರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪುಟಿನ್ ` 2022ರಲ್ಲಿ ಈ ಹಿಂದಿನ ಅಮೆರಿಕದ ಆಡಳಿತದೊಂದಿಗಿನ ನಮ್ಮ ಕೊನೆಯ ಸಂಪರ್ಕದ ಸಂದರ್ಭ ಹಿಂದಿನ ಅಮೆರಿಕ ಅಧ್ಯಕ್ಷರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದ್ದೆ. ಪರಿಸ್ಥಿತಿ ಹಗೆತನ ಸಾಧಿಸುವ ಮಟ್ಟಕ್ಕೆ ಬಂದರೆ ಹಿಂತಿರುಗಲು ಕಷ್ಟ ಎಂದಿದ್ದೆ. ಆದರೆ ಅವರು ತಿರಸ್ಕರಿಸಿದರು. ಇದು ನಿಜವಾಗಿಯೂ ದೊಡ್ಡ ಪ್ರಮಾದವಾಗಿತ್ತು. ಒಂದು ವೇಳೆ ಬೈಡನ್ ಜಾಗದಲ್ಲಿ ಟ್ರಂಪ್ ಇದ್ದರೆ ಖಂಡಿತಾ ಈ ಪ್ರಮಾದ ನಡೆಯುತ್ತಿರಲಿಲ್ಲ. ಟ್ರಂಪ್ ಮತ್ತು ತನ್ನ ನಡುವೆ ಉತ್ತಮ ವಿಶ್ವಾಸಾರ್ಹ ಸಂಪರ್ಕವಿದೆ. ಇಂತಹ ವಿಧಾನವು ಉಕ್ರೇನ್ ಸಂಘರ್ಷವನ್ನು ಅತೀ ಶೀಘ್ರವಾಗಿ ಕೊನೆಗೊಳಿಸುತ್ತದೆ' ಎಂದು ಪುಟಿನ್ ಹೇಳಿದ್ದಾರೆ.

ಅಮೆರಿಕ-ರಶ್ಯ ಸಂಬಂಧಗಳಲ್ಲಿನ ಈ ಹಿಂದಿನ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸುವುದು ಮುಖ್ಯವಾಗಿದೆ. ಟ್ರಂಪ್ ಅವರ ಸ್ನೇಹಮಯ ರೀತಿಯ ಸಂಭಾಷಣೆ ಮಾತುಕತೆ ಯಶಸ್ವಿಯಾಗಿ ನಡೆಯಲು ಕಾರಣವಾಗಿದೆ ಎಂದು ಪುಟಿನ್ ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News