ಅಮೆರಿಕದಲ್ಲಿ ನಾಪತ್ತೆಯಾಗಿದ್ದ ನಾಲ್ವರು ಭಾರತೀಯರು ಅಪಘಾತದಲ್ಲಿ ಮೃತ್ಯು ; ತನಿಖೆ ವೇಳೆ ಬಹಿರಂಗ
Photo credit: indiatoday.in
ನ್ಯೂಯಾರ್ಕ್ : ಅಮೆರಿಕದ ನ್ಯೂಯಾರ್ಕ್‌ನ ಬಫಲೋ ನಗರದಿಂದ ಪೆನ್ಸಿಲ್ವೇನಿಯಾದ ಪಿಟ್ಸ್ ಬರ್ಗ್ ನಗರಕ್ಕೆ ತೆರಳುತ್ತಿದ್ದಾಗ ನಾಪತ್ತೆಯಾಗಿದ್ದ ಭಾರತೀಯ ಮೂಲದ ನಾಲ್ವರು ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಮಾರ್ಷಲ್ ಕೌಂಟಿ ಶೆರಿಫ್ ಮೈಕ್ ಡೋಘರ್ಟಿ ಅವರು ದೃಢಪಡಿಸಿದ್ದಾರೆ.
ಮೃತ ಭಾರತೀಯರನ್ನು ಡಾ. ಕಿಶೋರ್ ದಿವಾನ್, ಆಶಾ ದಿವಾನ್, ಶೈಲೇಶ್ ದಿವಾನ್ ಮತ್ತು ಗೀತಾ ದಿವಾನ್ ಎಂದು ಗುರುತಿಸಲಾಗಿದೆ. ಇವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಅವರು ತೆರಳುತ್ತಿದ್ದ ಕಾರು ಆಗಸ್ಟ್ 2ರಂದು ರಾತ್ರಿ ಪಶ್ಚಿಮ ವರ್ಜೀನಿಯಾದ ಮಾರ್ಷಲ್ ಕೌಂಟಿಯ ಬಿಗ್ ವೀಲಿಂಗ್ ಕ್ರೀಕ್ ರಸ್ತೆಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಒಂದೇ ಕುಟುಂಬದ ನಾಲ್ವರು ಸದಸ್ಯರು ಮಂಗಳವಾರ ನಾಪತ್ತೆಯಾಗಿದ್ದರು. ಪೆನ್ಸಿಲ್ವೇನಿಯಾದ ಈರಿಯ ಪೀಚ್ ಸ್ಟ್ರೀಟ್‌ನಲ್ಲಿರುವ ಬರ್ಗರ್ ಕಿಂಗ್ ಸ್ಟೋರ್‌ನಲ್ಲಿ ಕೊನೆಯ ಬಾರಿಗೆ ಅವರು ಕಾಣಿಸಿಕೊಂಡಿದ್ದರು ಎಂದು ತನಿಖೆಯ ವೇಳೆ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದರು. ಹೆಚ್ಚಿನ ತನಿಖೆಯ ವೇಳೆ ಕಾರು ಅಪಘಾತದಲ್ಲಿ ನಾಲ್ವರು ಮೃತಪಟ್ಟಿರುವುದು ಬಹಿರಂಗವಾಗಿದೆ.