ಟೇಕ್ ಆಫ್‌ಗೆ ಕೆಲವೇ ಕ್ಷಣ ಮುನ್ನ ಅಮೆರಿಕನ್ ಏರ್‌ಲೈನ್ಸ್ ವಿಮಾನದಲ್ಲಿ ಬೆಂಕಿ : ಪ್ರಯಾಣಿಕರ ಸ್ಥಳಾಂತರ
ವಾಷಿಂಗ್ಟನ್ : ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಿಯಾಮಿಗೆ ತೆರಳುತ್ತಿದ್ದ ಅಮೆರಿಕನ್ ಏರ್‌ಲೈನ್ಸ್ ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡ ಕಾರಣ ಟೇಕ್‌ಆಫ್‌ನ್ನು ಸ್ಥಗಿತಗೊಳಿಸಲಾಗಿದೆ.
ವಿಮಾನದಲ್ಲಿ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡ ತಕ್ಷಣ ಎಲ್ಲಾ173 ಪ್ರಯಾಣಿಕರನ್ನು ವಿಮಾನದಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಓರ್ವ ಪ್ರಯಾಣಿಕನಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
AA-3023 ವಿಮಾನ ಮಿಯಾಮಿಗೆ ಹಾರಾಟಕ್ಕೆ ಮುಂದಾಗಿತ್ತು. ಈ ವೇಳೆ ಟೈರ್‌ನಲ್ಲಿ ನಿರ್ವಹಣೆ ಸಮಸ್ಯೆ ಕಂಡು ಬಂದಿದೆ ಎಂದು ವಿಮಾನಯಾನ ಸಂಸ್ಥೆ ವರದಿ ಮಾಡಿದೆ.
ವೈರಲ್ ವೀಡಿಯೊದಲ್ಲಿ ವಿಮಾನದ ಸುತ್ತಲೂ ಹೊಗೆ ಆವರಿಸಿಕೊಂಡಿದೆ. ರನ್‌ವೇಯಲ್ಲಿ ಪ್ರಯಾಣಿಕರ ಸ್ಥಳಾಂತರ ನಡೆಯುತ್ತಿದ್ದಂತೆ ಲ್ಯಾಂಡಿಂಗ್ ಗೇರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಕಂಡು ಬಂದಿದೆ.
ʼವಿಮಾನವು ಡೆನ್ವರ್ ಹೊರಡುವಾಗ ಲ್ಯಾಂಡಿಂಗ್ ಗೇರ್ ಸಮಸ್ಯೆ ಕಂಡು ಬಂದಿದೆ. ಪ್ರಯಾಣಿಕರನ್ನು ತಕ್ಷಣವೇ ರನ್ವೇಯಲ್ಲಿ ಸ್ಥಳಾಂತರಿಸಿ ಬಸ್ ಮೂಲಕ ಟರ್ಮಿನಲ್‌ಗೆ ಸಾಗಿಸಲಾಗಿದೆ. ಬೆಂಕಿ ಮತ್ತು ಅಸಮರ್ಪಕ ಕಾರ್ಯದ ಕಾರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತೇವೆʼ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ಹೇಳಿದೆ.