×
Ad

ಚೀನಾದಲ್ಲಿ ಅರುಣಾಚಲ ಮಹಿಳೆಗೆ ಜನಾಂಗೀಯ ನಿಂದನೆ: ಸಿಎಂ ಪೆಮ ಖಂಡು ಖಂಡನೆ

Update: 2025-11-25 21:21 IST

Photo Credit : NDTV 

ಇಟಾನಗರ, ನ. 25: ಇತ್ತೀಚೆಗೆ ಶಾಂಘೈ ವಿಮಾನ ನಿಲ್ದಾಣದಲ್ಲಿ ಅರುಣಾಚಲಪ್ರದೇಶದ ಮಹಿಳೆಯೊಬ್ಬರನ್ನು ಚೀನಾ ನಡೆಸಿಕೊಂಡ ರೀತಿಯ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಪೆಮ ಖಂಡು ಮಂಗಳವಾರ ಆಘಾತ ವ್ಯಕ್ತಪಡಿಸಿದ್ದಾರೆ. ಚೀನಾದ ಅಧಿಕಾರಿಗಳು ಮಹಿಳೆಯನ್ನು ಜನಾಂಗೀಯ ನಿಂದನೆಗೆ ಗುರಿಪಡಿಸಿರುವುದು ಆಘಾತಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಅರುಣಾಚಲಪ್ರದೇಶವು ಚೀನಾದ ಭಾಗವಾಗಿರುವುದರಿಂದ ನನ್ನ ಭಾರತೀಯ ಪಾಸ್‌ಪೋರ್ಟ್ ಅಸಿಂಧುವಾಗಿದೆ ಎಂಬುದಾಗಿ ಚೀನಾದ ಅಧಿಕಾರಿಗಳು ಘೋಷಿಸಿದರು ಎಂದು ತನ್ನನ್ನು ಪ್ರೇಮಾ ವಾಂಗ್‌ಜೊಮ್ ತೊಂಗ್ಡೊಕ್ ಎಂಬುದಾಗಿ ಗುರುತಿಸಿಕೊಂಡ ಮಹಿಳೆ ಸೋಮವಾರ ಹೇಳಿದ್ದರು. ತನ್ನನ್ನು ವಲಸೆ ಅಧಿಕಾರಿಗಳು ಶಾಂಘೈ ವಿಮಾನ ನಿಲ್ದಾಣದಲ್ಲಿ 18 ಗಂಟೆಗಳಿಗೂ ಹೆಚ್ಚು ಕಾಲ ಕೂಡಿಹಾಕಿದರು ಎಂದು ಅವರು ಹೇಳಿದ್ದಾರೆ. ಅಧಿಕಾರಿಗಳು ನನಗೆ ತಮಾಷೆ ಮಾಡುತ್ತಾ, ಚೀನಾ ಪಾಸ್‌ ಪೋರ್ಟ್‌ ಗೆ ಅರ್ಜಿ ಹಾಕುವಂತೆ ಸೂಚಿಸಿದರು ಎಂದಿದ್ದಾರೆ.

‘‘ಅರುಣಾಚಲಪ್ರದೇಶದ ಹೆಮ್ಮೆಯ ಭಾರತೀಯ ಪ್ರಜೆ ಪ್ರೇಮಾ ವಾಂಗ್‌ಜೊಮ್ ತೊಂಗ್ಡೊಕ್‌ ರನ್ನು ಚೀನಾದ ಅಧಿಕಾರಿಗಳು ನಡೆಸಿಕೊಂಡ ರೀತಿಯ ಬಗ್ಗೆ ನನಗೆ ತೀರಾ ಆಘಾತವಾಗಿದೆ. ಮಾನ್ಯ ಭಾರತೀಯ ಪಾಸ್‌ಪೋರ್ಟ್ ಇದ್ದರೂ ಅವರಿಗೆ ಅವಮಾನ ಮಾಡಿರುವುದು ಮತ್ತು ಅವರನ್ನು ಜನಾಂಗೀಯ ನಿಂದನೆಗೆ ಗುರಿಪಡಿಸಿರುವುದು ಅಸ್ವೀಕಾರಾರ್ಹವಾಗಿದೆ’’ ಎಂದು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಾಕಿದ ಸಂದೇಶವೊಂದರಲ್ಲಿ ಖಂಡು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News