×
Ad

ಹಸೀನಾ ಗಡೀಪಾರು: ನೆರವಿವಾಗಿ ಇಂಟರ್‌ಪೋಲ್ ಮೊರೆ ಹೋಗಲು ಬಾಂಗ್ಲಾದೇಶ ನಿರ್ಧಾರ

Update: 2025-11-19 21:39 IST

 ಶೇಖ್ ಹಸೀನಾ |Photo Credit : PTI

ಢಾಕಾ, ನ. 19: ಮಾಜಿ ಪ್ರಧಾನಿ ಶೇಖ್ ಹಸೀನಾ ಮತ್ತು ಮಾಜಿ ಗೃಹ ಸಚಿವ ಅಸಾದುಝಮನ್ ಖಾನ್ ಕಮಲ್‌ ರನ್ನು ಭಾರತದಿಂದ ಗಡೀಪಾರುಗೊಳಿಸುವಲ್ಲಿ ಇಂಟರ್‌ಪೋಲ್ ನೆರವು ಪಡೆಯಲು ಬಾಂಗ್ಲಾದೇಶ ಸರಕಾರ ಮುಂದಾಗಿದೆ.

ಬಾಂಗ್ಲಾದೇಶದಲ್ಲಿ ಕಳೆದ ವರ್ಷ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯನ್ನು ಹಿಂಸಾತ್ಮಕವಾಗಿ ಹತ್ತಿಕ್ಕುವ ಮೂಲಕ ಅಂದಿನ ಪ್ರಧಾನಿ ಹಸೀನಾ ಮಾನವತೆಯ ವಿರುದ್ಧ ಅಪರಾಧ ಎಸಗಿದ್ದಾರೆ ಎಂಬುದಾಗಿ ಆರೋಪಿಸಲಾಗಿತ್ತು. ಈ ಆರೋಪಗಳ ಬಗ್ಗೆ ತನಿಖೆ ನಡೆಸಿರುವ ಬಾಂಗ್ಲಾದೇಶದ ಅಂತರ್‌ರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯೊಂದು, ಸೋಮವಾರ ಶೇಖ್ ಹಸೀನಾ ಮತ್ತು ಮಾಜಿ ಗೃಹ ಸಚಿವ ಕಮಲ್‌ರಿಗೆ ಮರಣ ದಂಡನೆ ವಿಧಿಸಿದೆ. ಅದರ ಬೆನ್ನಿಗೇ, ಮುಹಮ್ಮದ್ ಯೂನುಸ್ ನೇತೃತ್ವದ ಆ ದೇಶದ ಮಧ್ಯಂತರ ಸರಕಾರವು, ಹಸೀನಾ ಮತ್ತು ಕಮಲ್‌ರನ್ನು ದೇಶಕ್ಕೆ ಗಡೀಪಾರು ಮಾಡುವಂತೆ ಭಾರತ ಸರಕಾರಕ್ಕೆ ಮನವಿ ಮಾಡಿತ್ತು.

ಮಾಜಿ ಪ್ರಧಾನಿ ಮತ್ತು ಮಾಜಿ ಗೃಹ ಸಚಿವರನ್ನು ಗಡೀಪಾರುಗೊಳಿಸುವಲ್ಲಿ ನೆರವು ನೀಡುವಂತೆ ಇಂಟರ್‌ಪೋಲನ್ನು ಕೋರುವ ಅರ್ಜಿಯನ್ನು ಬಾಂಗ್ಲಾದೇಶದ ಅಂತರ್‌ರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯ ಮುಖ್ಯ ಪ್ರಾಸಿಕ್ಯೂಟರ್ ಕಚೇರಿಯು ಸಿದ್ಧಪಡಿಸುತ್ತಿದೆ ಎಂದು ಬಾಂಗ್ಲಾದೇಶದ ‘ದ ಡೇಲಿ ಸ್ಟಾರ್’ ವರದಿ ಮಾಡಿದೆ.

ಬೃಹತ್ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, 2024 ಆಗಸ್ಟ್ 5ರಂದು ಶೇಖ್ ಹಸೀನಾ ಭಾರತಕ್ಕೆ ಪಲಾಯನಗೈದಿದ್ದಾರೆ. ಅಂದಿನಿಂದ ಅವರು ಭಾರತದಲ್ಲೇ ಅಜ್ಞಾತ ಸ್ಥಳವೊಂದರಲ್ಲಿ ವಾಸಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News