ಕೆನಡ ಮೂಲದ ಬರಹಗಾರ ಡೇವಿಡ್ ಸಲೈಗೆ ಬೂಕರ್ ಪ್ರಶಸ್ತಿ
ಡೇವಿಡ್ ಸಲೈ (Photo credit: AP)
ಲಂಡನ್, ನ.11: ಕೆನಡ–ಹಂಗೇರಿ–ಬ್ರಿಟನ್ ಮೂಲದ ಖ್ಯಾತ ಬರಹಗಾರ ಡೇವಿಡ್ ಸಲೈ ತಮ್ಮ ‘ಫ್ಲೆಶ್’ ಕಾದಂಬರಿಗಾಗಿ ಈ ವರ್ಷದ ಬೂಕರ್ ಪ್ರಶಸ್ತಿ ಗೆದ್ದಿದ್ದಾರೆ. ಈ ಬಾರಿಯ ಬೂಕರ್ ಪ್ರಶಸ್ತಿಯ ಅಂತಿಮ ಸುತ್ತಿನಲ್ಲಿ ಆಂಡ್ರ್ಯೂ ಮಿಲ್ಲರ್ ಹಾಗೂ ಕಿರಣ್ ದೇಸಾಯಿ ಸೇರಿದಂತೆ ಐದು ಮಂದಿ ಇದ್ದರು.
ಕೆನಡಾದಲ್ಲಿ ಜನಿಸಿದ, ಯುಕೆ ನಲ್ಲಿ ಬೆಳೆದ ಹಾಗೂ ಪ್ರಸ್ತುತ ವಿಯೆನ್ನಾದಲ್ಲಿ ವಾಸಿಸುತ್ತಿರುವ ಸಲೈ, 2016ರಲ್ಲಿ ಪ್ರಕಟವಾದ “ಆಲ್ ದಾಟ್ ಮ್ಯಾನ್ ಇಸ್” ಕೃತಿಗೆ ಬೂಕರ್ ಪ್ರಶಸ್ತಿಯ ಅಂತಿಮ ಹಂತಕ್ಕೆ ತಲುಪಿದ್ದರು.
ಐರಿಷ್ ಸಾಹಿತಿ ರಾಡ್ಡಿ ಡಾಯ್ಲ್ ಮತ್ತು ನಟಿ ಸಾರಾ ಜೆಸ್ಸಿಕಾ ಪಾರ್ಕರ್ ಅವರಿದ್ದ ತೀರ್ಪುಗಾರರ ಮಂಡಳಿ ಈ ಬಾರಿಯ ಬೂಕರ್ ಪ್ರಶಸ್ತಿಗೆ 51 ವರ್ಷದ ಸಲೈ ಅವರನ್ನು ಆಯ್ಕೆ ಮಾಡಿದೆ. ಸುಮಾರು 66 ಲಕ್ಷ ರೂಪಾಯಿ ನಗದು ಬಹುಮಾನವನ್ನು ಈ ಪ್ರಶಸ್ತಿಯು ಒಳಗೊಂಡಿದೆ. ಬೂಕರ್ ಪ್ರಶಸ್ತಿಯು ಬರಹಗಾರರ ಕೃತಿಯ ಮಾರಾಟಕ್ಕೆ ಉತ್ತೇಜನ ನೀಡುತ್ತದೆ. ಆ ಮೂಲಕ ಜಗತ್ತಿನಾದ್ಯಂತ ಈ ಬರಹಗಾರರು ಖ್ಯಾತರಾಗುತ್ತಾರೆ.
‘ಫ್ಲೆಶ್’ ಕಾದಂಬರಿಯು ವಲಸಿಗನಾದ ಇಸ್ತ್ವಾನ್ ಎಂಬ ಯುವಕನ ಬದುಕನ್ನು ಆಧರಿಸಿದೆ. ಬ್ರಿಟನ್ ನಲ್ಲಿ ವಲಸಿಗನಾಗಿ ಹೋರಾಟದ ಬದುಕನ್ನು ನಡೆಸುವ ಆತ, ತನಗಿಂತ ಹಿರಿಯ ಮಹಿಳೆಯೊಂದಿಗಿನ ಸಂಬಂಧದಿಂದ ಲಂಡನ್ನ ಉನ್ನತ ಸಮಾಜದ ನಿವಾಸಿಯಾಗಿ ರೂಪಾಂತರಗೊಳ್ಳುವ ಕಥೆ ಈ ಕಾದಂಬರಿಯ ಹೂರಣವಾಗಿದೆ. ಮಾನವ ದೇಹ, ಭೌತಿಕ ಅನುಭವ ಮತ್ತು ವಲಸೆಯ ಮನೋಭಾವವನ್ನು ಈ ಕೃತಿಯಲ್ಲಿ ಆಳವಾಗಿ ಚಿತ್ರಿಸಲಾಗಿದೆ.
“ನಾನು ಹಂಗೇರಿಯ ವಲಸಿಗರ ಬದುಕಿನ ನಿಜವಾದ ಅನುಭವದ ಬಗ್ಗೆ ಅನ್ವೇಷಿಸಲು ಬಯಸಿದೆ,” ಎಂದು ಸಲೈ ತಿಳಿಸಿದ್ದಾರೆ.
“ಇಸ್ತ್ವಾನ್ ಕಾರ್ಮಿಕ ವರ್ಗದ ವ್ಯಕ್ತಿ; ಕಾದಂಬರಿಯಲ್ಲಿ ಇಂತಹವರ ಬದುಕು ಅಪರೂಪವಾಗಿ ಕಾಣುತ್ತದೆ. ಈ ಕೃತಿ ಓದಿದ ನಂತರ ನಾನು ಡಬ್ಲಿನ್ ಪಬ್ಗಳ ಬಾಗಿಲುಗಳಲ್ಲಿ ನಿಂತಿರುವ ಬೌನ್ಸರ್ಗಳತ್ತ ಹೊಸ ದೃಷ್ಟಿಯಿಂದ ನೋಡಲು ಪ್ರಾರಂಭಿಸಿದೆ,” ಎಂದು ತೀರ್ಪುಗಾರ ರಾಡ್ಡಿ ಡಾಯ್ಲ್ ಅವರು ಹೇಳಿದ್ದಾರೆ.