ಟ್ರಂಪ್ ಸುಂಕಾಘಾತಕ್ಕೆ `ಬ್ರಿಕ್ಸ್' ಮೂಲಕ ಪ್ರತ್ಯುತ್ತರಕ್ಕೆ ಸಿದ್ಧತೆ : ಭಾರತ, ರಶ್ಯ, ದ.ಆಫ್ರಿಕಾ ಜೊತೆ ಮಾತುಕತೆಗೆ ನಿರ್ಧಾರ
ಚೀನಾ ಅಧ್ಯಕ್ಷರ ಜೊತೆ ಬ್ರೆಝಿಲ್ ಅಧ್ಯಕ್ಷರ ಮಾತುಕತೆ
ಡೊನಾಲ್ಡ್ ಟ್ರಂಪ್ | PC : NDTV
ಬ್ರಸೀಲಿಯಾ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸುಂಕದ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಒತ್ತಡ ಹೇರಲು ಬಯಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಬ್ರೆಝಿಲ್ ಅಧ್ಯಕ್ಷ ಲೂಯಿಸ್ ಇನಾಶಿಯೊ ಲುಲಾ ಡ'ಸಿಲ್ವ ಈ ವಿಷಯವನ್ನು ಮುಂಬರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಚರ್ಚಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಅಮೆರಿಕದ ಸುಂಕ ಸಮರವನ್ನು ಅಭಿವೃದ್ಧಿಶೀಲ ರಾಷ್ಟ್ರಗಳು ಸಂಘಟಿತವಾಗಿ ಎದುರಿಸುವ ಬಗ್ಗೆ `ಬ್ರಿಕ್ಸ್'ನ ಹಾಲಿ ಅಧ್ಯಕ್ಷ ದೇಶ ಬ್ರೆಝಿಲ್ ಸುಳಿವು ನೀಡಿದೆ. ಅಮೆರಿಕ ಜಾಗತಿಕ ಸಹಕಾರದ ಸಮತೋಲನಕ್ಕೆ ಧಕ್ಕೆ ತರುವ `ಏಕಪಕ್ಷೀಯ' ಮತ್ತು `ಬಹುಪಕ್ಷೀಯ ವಿರೋಧಿ' ವ್ಯಾಪಾರ ವಿಧಾನವನ್ನು ಅಳವಡಿಸಿಕೊಂಡಿದೆ ಎಂದು ಲೂಲಾ ಆರೋಪಿಸಿದ್ದಾರೆ. ಅಮೆರಿಕದ ಸುಂಕ `ಬೆದರಿಕೆ'ಗೆ ಸಾಮೂಹಿಕ ಬ್ರಿಕ್ಸ್ ಪ್ರತಿಕ್ರಿಯೆಯನ್ನು ಪ್ರಾರಂಭಿಸುವ ವಿಶಾಲ ಪ್ರಯತ್ನದ ಭಾಗವಾಗಿ ಬ್ರೆಝಿಲ್ ಅಧ್ಯಕ್ಷರು ಈಗಾಗಲೇ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಜೊತೆ ಮಾತುಕತೆ ನಡೆಸಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ಮಧ್ಯೆ, ಚೀನಾವು ಬ್ರೆಝಿಲ್‌ಗೆ ಬೆಂಬಲ ನೀಡುವುದಾಗಿ ಹೇಳಿದೆ. ಬ್ರೆಝಿಲ್ ಅಧ್ಯಕ್ಷರ ಮುಖ್ಯ ಸಲಹೆಗಾರ ಸೆಲ್ಸೊ ಅಮೋರಿಮ್ ಜೊತೆ ಫೋನ್ ಮೂಲಕ ಮಾತುಕತೆ ನಡೆಸಿದ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ `ಬ್ರೆಝಿಲ್‌ನ ಸಾರ್ವಭೌಮತ್ವ ಮತ್ತು ಅಭಿವೃದ್ಧಿಯ ಹಕ್ಕುಗಳಿಗೆ ಚೀನಾದ ಬೆಂಬಲವನ್ನು ಪುನರುಚ್ಚರಿಸಿದ್ದಾರೆ ಮತ್ತು ಬ್ರಿಕ್ಸ್ ಮೂಲಕ ಆಳವಾದ ಕಾರ್ಯತಂತ್ರದ ಸಂಬಂಧಗಳಿಗೆ' ಕರೆ ನೀಡಿದ್ದಾರೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.
ಇತರ ದೇಶಗಳನ್ನು ನಿಗ್ರಹಿಸಲು ಅಸ್ತ್ರವಾಗಿ ಸುಂಕವನ್ನು ಬಳಸುವುದು ವಿಶ್ವಸಂಸ್ಥೆಯ ಚಾರ್ಟರ್(ಸನದು) ಅನ್ನು ಉಲ್ಲಂಘಿಸುತ್ತದೆ, ವಿಶ್ವ ವ್ಯಾಪಾರ ಸಂಘಟನೆಯ ನಿಯಮಗಳನ್ನು ಕಡೆಗಣಿಸುತ್ತದೆ ಮತ್ತು ಇದು ಸಮರ್ಥನೀಯವಲ್ಲ' ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ. `ಅಧ್ಯಕ್ಷ ಟ್ರಂಪ್ ಅವರ ಇಂಗಿತ ಸ್ಪಷ್ಟವಾಗಿದೆ. ಅವರು ಸಾಮೂಹಿಕವಾಗಿ ಒಪ್ಪಂದಗಳನ್ನು ಮಾಡಿಕೊಳ್ಳುವ ಬಹುಪಕ್ಷೀಯತೆಯನ್ನು ಕೆಡವಲು ಬಯಸಿದ್ದಾರೆ. ಮತ್ತು ಏಕಪಕ್ಷೀಯತೆಯನ್ನು ಬಯಸಿದ್ದಾರೆ. ಸಣ್ಣ ಲ್ಯಾಟಿನ್ ಅಮೆರಿಕನ್ ದೇಶಕ್ಕೆ ಅಮೆರಿಕದೊಂದಿಗೆ ಚೌಕಾಶಿ ಮಾಡುವ ಶಕ್ತಿಯನ್ನು ಹೊಂದಿದೆಯೇ ? ಎಂದು ಬ್ರೆಝಿಲ್ ಅಧ್ಯಕ್ಷರು ಪ್ರಶ್ನಿಸಿದ್ದಾರೆ. ` ಬ್ರೆಝಿಲ್ ಬ್ರಿಕ್ಸ್‌ನ ಹಾಲಿ ಅಧ್ಯಕ್ಷತೆಯನ್ನು ಹೊಂದಿರುವುದರಿಂದ ರಶ್ಯ, ದ.ಆಫ್ರಿಕಾ ಸೇರಿದಂತೆ ಇತರ ದೇಶಗಳ ಜೊತೆ ಮಾತುಕತೆ ನಡೆಸಿ ಸುಂಕವು ಪ್ರತಿಯೊಂದು ದೇಶಕ್ಕೂ ಯಾವ ರೀತಿಯ ಪರಿಣಾಮ ಬೀರಿದೆ ಎಂದು ಪರಿಶೀಲಿಸಲಾಗುವುದು. ಪ್ರತಿಯೊಂದು ದೇಶದ ಜೊತೆ ಚರ್ಚೆ ನಡೆಸಲು ಪ್ರಯತ್ನಿಸಲಾಗುವುದು. ಇದರಿಂದ ನಮಗೆ ನಿರ್ಧಾರ ಕೈಗೊಳ್ಳಲು ಸುಲಭವಾಗಲಿದೆ. ಜಿ20 ಗುಂಪಿನಲ್ಲಿ ಬ್ರಿಕ್ಸ್‌ನ 10 ಸದಸ್ಯರಿದ್ದಾರೆ ಎಂಬುದನ್ನು ನೆನಪಿಸಿಕೊಳ್ಳುವುದು ಮುಖ್ಯವಾಗಿದೆ ಎಂದು ಡ'ಸಿಲ್ವ ಹೇಳಿದ್ದಾರೆ.
ಬ್ರಿಕ್ಸ್ `ಅಮೆರಿಕ ವಿರೋಧಿ' ಗುಂಪು ಎಂದು ಕಳೆದ ತಿಂಗಳು ಆರೋಪಿಸಿದ್ದ ಟ್ರಂಪ್ ಬ್ರಿಕ್ಸ್ ಸದಸ್ಯ ದೇಶಗಳ ಸರಕುಗಳ ಮೇಲೆ ಹೆಚ್ಚುವರಿ 20% ಸುಂಕ ವಿಧಿಸುವುದಾಗಿ ಬೆದರಿಕೆ ಒಡ್ಡಿದ್ದರು.
► ಟ್ರಂಪ್ ಸುಂಕದ ಪ್ರಥಮ ಕಂತು ಜಾರಿಗೆ
ಸುಮಾರು 90 ದೇಶಗಳನ್ನು ಗುರಿಯಾಗಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣ ಸುಂಕದ ಪ್ರಥಮ ಹಂತ ಬುಧವಾರ ಮಧ್ಯರಾತ್ರಿಯ ಬಳಿಕ ಜಾರಿಗೆ ಬಂದಿದೆ.
`ಇದು ಮಧ್ಯರಾತ್ರಿ ಸುಂಕದ ರೂಪದಲ್ಲಿ ಕೋಟ್ಯಾಂತರ ಡಾಲರ್‌ಗಳು ಇನ್ನು ಅಮೆರಿಕಕ್ಕೆ ಹರಿದು ಬರುತ್ತದೆ' ಎಂದು ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ `ಟ್ರುಥ್ ಸೋಷಿಯಲ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದಕ್ಕೂ ಮುನ್ನ ಟ್ರಂಪ್ `ಪರಸ್ಪರ ಸುಂಕಗಳು ಇವತ್ತು(ಬುಧವಾರ) ನಡುರಾತ್ರಿ ಜಾರಿಗೆ ಬರುತ್ತದೆ. ಕೋಟ್ಯಾಂತರ ಡಾಲರ್ ಹಣ ( ಇದರಲ್ಲಿ ಹೆಚ್ಚಿನ ಪಾಲು ಹಲವು ವರ್ಷಗಳಿಂದ ಅಮೆರಿಕದಿಂದ ಪ್ರಯೋಜನ ಪಡೆದು ಖುಷಿ ಪಡುತ್ತಿದ್ದ ರಾಷ್ಟ್ರಗಳಿಂದ) ಅಮೆರಿಕಾಕ್ಕೆ ಹರಿದು ಬರಲಿದೆ' ಎಂದು ಮತ್ತೊಂದು ಪೋಸ್ಟ್ ಮಾಡಿದ್ದರು. ಪ್ರಥಮ ಕಂತಿನಲ್ಲಿ ಭಾರತದ ಸರಕುಗಳ ಮೇಲೆ 25% ಸುಂಕ ವಿಧಿಸಲಾಗುತ್ತದೆ. ಟ್ರಂಪ್ ಬುಧವಾರ ಘೋಷಿಸಿದ್ದ ಹೆಚ್ಚುವರಿ 25% ಸುಂಕ 21 ದಿನಗಳ ಬಳಿಕ (ಆಗಸ್ಟ್ 27ರಿಂದ) ಜಾರಿಗೊಳ್ಳಲಿದೆ.
► ಇತರ ದೇಶಗಳ ಮೇಲೆಯೂ ಹೆಚ್ಚುವರಿ ಸುಂಕದ ಸುಳಿವು ನೀಡಿದ ಟ್ರಂಪ್
ರಶ್ಯದ ತೈಲ ಖರೀದಿಸುತ್ತಿರುವ ಕಾರಣ ಭಾರತದ ಮೇಲೆ ಹೆಚ್ಚುವರಿ ಸುಂಕ ವಿಧಿಸಿರುವ ಅಮೆರಿಕ, ರಶ್ಯದ ತೈಲ ಖರೀದಿಸುತ್ತಿರುವ ಇತರ ದೇಶಗಳ ಬಗ್ಗೆ ಯಾಕೆ ಮೌನವಾಗಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ `ಈ ಬಗ್ಗೆಯೂ ಗಮನ ಹರಿಸಲಾಗುವುದು' ಎಂದು ಉತ್ತರಿಸಿರುವುದಾಗಿ ವರದಿಯಾಗಿದೆ.
ಶ್ವೇತಭವನದಲ್ಲಿ ಟ್ರಂಪ್ ನಡೆದ ಸುದ್ದಿಗೋಷ್ಟಿಯಲ್ಲಿ `ಚೀನಾ ಮತ್ತು ಟರ್ಕಿ ದೇಶಗಳೂ ರಶ್ಯದಿಂದ ತೈಲ ಖರೀದಿಸುತ್ತಿವೆ. ಆದರೆ ಚೀನಾದ ವಿರುದ್ಧ 30%, ಟರ್ಕಿ ವಿರುದ್ಧ 15% ಸುಂಕ ವಿಧಿಸಿರುವ' ಕುರಿತ ಪ್ರಶ್ನೆಗೆ ಉತ್ತರಿಸಿದ ಟ್ರಂಪ್ ` ಹೆಚ್ಚುವರಿ ಸುಂಕದ ಕ್ರಮ ಮುಂದುವರಿಯಬಹುದು. ಇದು ಯಾವಾಗ ಬೇಕಾದರೂ ಸಂಭವಿಸಬಹುದು' ಎಂದು ಹೇಳಿರುವುದಾಗಿ ವರದಿಯಾಗಿದೆ.