×
Ad

ಲುಫ್ತಾನ್ಸಾ ವಿಮಾನದಲ್ಲಿ ಇಬ್ಬರು ಅಪ್ರಾಪ್ತರಿಗೆ ಮುಳ್ಳಿನ ಚಮಚದಿಂದ ತಿವಿದ ಭಾರತೀಯ ಪ್ರಜೆ : ಆರೋಪ

Update: 2025-10-28 22:11 IST

Photo : ZUMAPRESS.com

ಚಿಕಾಗೊ: ಚಿಕಾಗೊದಿಂದ ಜರ್ಮನಿಗೆ ಪ್ರಯಾಣ ಬೆಳೆಸಿದ್ದ ಲುಫ್ತಾನ್ಸಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಅಪ್ರಾಪ್ತರಿಗೆ ಮುಳ್ಳಿನ ಚಮಚದಿಂದ ತಿವಿದು, ಮತ್ತೊಬ್ಬ ಸಹ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ 28 ವರ್ಷದ ಭಾರತೀಯ ಪ್ರಜೆಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ಟೋಬರ್ 25ರಂದು ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಈ ಘಟನೆಯ ಬೆನ್ನಿಗೇ, ಚಿಕಾಗೊಗೆ ತೆರಳುತ್ತಿದ್ದ ವಿಮಾನದ ಮಾರ್ಗವನ್ನು ಬೋಸ್ಟನ್ ಲೊಗಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬದಲಿಸಲಾಯಿತು ಎಂದು ಸೋಮವಾರ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟನೆಯಲ್ಲಿ ಮೆಸ್ಸಾಚುಸೆಟ್ಸ್ ಜಿಲ್ಲೆಯ ಅಮೆರಿಕ ಅಟಾರ್ನಿ ಕಚೇರಿ ತಿಳಿಸಿದೆ.

ದೋಷಾರೋಪ ಪಟ್ಟಿಯ ಪ್ರಕಾರ, ಪ್ರಣೀತ್ ಕುಮಾರ್ ಉಸಿರಿಪಲ್ಲಿ ಎಂದು ಗುರುತಿಸಲಾಗಿರುವ ಭಾರತೀಯ ಪ್ರಜೆಯು 17 ವರ್ಷದ ಅಪ್ತಾಪ್ತ ಯುವಕನ ಭುಜಕ್ಕೆ ಇರಿದಿದ್ದು, ಬಳಿಕ ಮತ್ತೊಬ್ಬ 17 ವರ್ಷದ ಸಹ ಪ್ರಯಾಣಿಕನ ತಲೆಯ ಹಿಂಬದಿಗೆ ಚಮಚದಿಂದ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ.

ಒಂದು ವೇಳೆ ಆರೋಪಿ ಪ್ರಣೀತ್ ಕುಮಾರ್ ಉಸಿರಿಪಲ್ಲಿ ವಿರುದ್ಧದ ಆರೋಪ ಸಾಬೀತಾದರೆ, 10 ವರ್ಷಗಳ ಸೆರೆವಾಸ ಶಿಕ್ಷೆಗೆ ಗುರಿಯಾಗಲಿದ್ದು, 2.5 ಲಕ್ಷ ಡಾಲರ್‌ವರೆಗೆ ದಂಡ ಪಾವತಿಸಬೇಕಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News