ಕೊಲಂಬಿಯಾ: ಕಾರು ಬಾಂಬ್ ಸ್ಫೋಟ, ಪೊಲೀಸ್ ಹೆಲಿಕಾಪ್ಟರ್ ಮೇಲೆ ದಾಳಿಯಲ್ಲಿ ಕನಿಷ್ಠ 18 ಮಂದಿ ಮೃತ್ಯು; 30 ಮಂದಿಗೆ ಗಾಯ
PC : X
ಬೊಗೊಟ, ಆ.22: ಕೊಲಂಬಿಯಾದಲ್ಲಿ ಕಾರು ಬಾಂಬ್ ಸ್ಫೋಟ ಮತ್ತು ಪೊಲೀಸ್ ಹೆಲಿಕಾಪ್ಟರ್ ಮೇಲೆ ಡ್ರೋನ್ ದಾಳಿಯಲ್ಲಿ 12 ಪೊಲೀಸ್ ಅಧಿಕಾರಿಗಳ ಸಹಿತ ಕನಿಷ್ಠ 18 ಮಂದಿ ಸಾವನ್ನಪ್ಪಿದ್ದು 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಕೊಕೈನ್(ಮಾದಕ ವಸ್ತು)ನ ಕಚ್ಛಾವಸ್ತು ಕೋಕಾ ಎಲೆ ಬೆಳೆಗಳನ್ನು ನಿರ್ಮೂಲನೆ ಮಾಡಲು ಉತ್ತರ ಕೊಲಂಬಿಯಾದ ಅಂಟೋಯ್ಖಿಯಾ ಎಂಬಲ್ಲಿಗೆ ಪೊಲೀಸ್ ಸಿಬ್ಬಂದಿಗಳನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ಮೇಲೆ ದಾಳಿ ನಡೆಸಲಾಗಿದ್ದು 12 ಪೊಲೀಸ್ ಅಧಿಕಾರಿಗಳು ಮೃತಪಟ್ಟಿದ್ದಾರೆ.
ಬಂಡುಕೋರ ಗುಂಪು ` ರೆವೊಲ್ಯುಷನರಿ ಆರ್ಮ್ಡ್ ಫೋರ್ಸಸ್ ಆಫ್ ಕೊಲಂಬಿಯಾ' (ಎಫ್ಎಆರ್ಸಿ) ದಾಳಿ ನಡೆಸಿದೆ ಎಂದು ಅಧ್ಯಕ್ಷ ಗುಸ್ತಾವೊ ಪೆಟ್ರೋ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಹೆಲಿಕಾಪ್ಟರ್ ಮೇಲೆ ಡ್ರೋನ್ ದಾಳಿ ನಡೆದಿದ್ದು ದಾಳಿಯ ಬಳಿಕ ಬೆಂಕಿ ಹೊತ್ತಿಕೊಂಡು ಹೆಲಿಕಾಪ್ಟರ್ ಪತನಗೊಂಡಿರುವುದು ಎಂದು ರಕ್ಷಣಾ ಸಚಿವ ಪೆಡ್ರೋ ಸ್ಯಾಂಚೆಸ್ ಹೇಳಿದ್ದಾರೆ.
ಈ ಮಧ್ಯೆ, ನೈಋತ್ಯ ನಗರ ಕ್ಯಾಲಿಯಲ್ಲಿ ಸ್ಫೋಟಕಗಳು ತುಂಬಿದ್ದ ವಾಹನವೊಂದು ಮಿಲಿಟರಿ ವಾಯುಯಾನ ಶಾಲೆಯ ಬಳಿ ಸ್ಫೋಟಗೊಂಡು ಐದು ಮಂದಿ ಸಾವನ್ನಪ್ಪಿದ್ದಾರೆ ಮತ್ತು 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ದಾಳಿಯನ್ನೂ ಎಫ್ಎಆರ್ಸಿ ನಡೆಸಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.