ಇಲಿನಾಯ್ಸ: ದುಷ್ಕರ್ಮಿಯ ಇರಿತಕ್ಕೆ ನಾಲ್ವರು ಬಲಿ ಏಳು ಮಂದಿಗೆ ಗಾಯ
ರಾಕ್ಫೋರ್ಡ್: ಉತ್ತರ ಇಲಿನಾಯ್ಸನ ರಾಕ್ಫೋರ್ಡ್ ನಗರದ ವಿವಿಧೆಡೆ ಬುಧವಾರ ದುಷ್ಕರ್ಮಿಯೊಬ್ಬ ಮನಬಂದಂತೆ ಜನರ ಮೇಲೆ ಚೂರಿಯಿಂದ ಇರಿದಿದ್ದು, ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಹಾಗೂ ಏಳು ಮಂದಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ 22 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಆತನ ವಿಚಾರಣೆ ನಡೆಸಲಾಗುತ್ತಿದೆ ಎಂದು ರಾಕ್ಫೋರ್ಡ್ ಪೊಲೀಸ್ ವರಿಷ್ಠೆ ಕಾರ್ಲಾ ರೆಡ್ಡ್ ತಿಳಿಸಿದ್ದಾರೆ. ಇರಿತದಿಂದ ಗಾಯಗೊಡಂವರ ಪೈಕಿ ಓರ್ವ ಮಹಿಳೆಯ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಆಕೆ ಹೇಳಿದ್ದಾರೆ.
ಈ ಘಟನೆಯಲ್ಲಿ ಇತರ ಶಂಕಿತರು ಶಾಮೀಲಾಗಿದ್ದಾರೆಂಬ ಬಗ್ಗೆ ಯಾವುದೇ ಮಾಹಿತಿಗಳಿಲ್ಲವೆಂದು ರೆಡ್ಡ್ ಹೇಳಿದ್ದಾರೆ. ಆರೋಪಿಯು ಈ ಹೇಯ ಅಪರಾಧವನ್ನು ಎಸಗಿರುವುದರ ಹಿಂದೆ ಇರುವ ಉದ್ದೇಶವೆನೆಂಬುದು ಇನ್ನೂ ಕೂಡಾ ಸ್ಪಷ್ಟವಾಗಿಲ್ಲವೆಂದು ತಿಳಿಸಿದರು.
ಇರಿತದಿಂದಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇನ್ನೋರ್ವ ವ್ಯಕ್ತಿಯು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆಂದು ಅವರು ಹೇಳಿದ್ದಾರೆ.
ಮೃತರಲ್ಲಿ 15 ವರ್ಷದ ಬಾಲಕಿ, 63 ವರ್ಷದ ಮಹಿಳೆ , 49 ವರ್ಷ ಹಾಗೂ 22 ವರ್ಷದ ಪುರುಷ ಸೇರಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.