ತಲೆಕೂದಲಿನ ಸ್ವರೂಪದ ಆಧಾರದಲ್ಲಿ ಉದ್ಯೋಗಿಗಳಿಗೆ ತಾರತಮ್ಯ ತಡೆಗೆ ಫ್ರಾನ್ಸ್ ಸಂಸತ್ತಿನಲ್ಲಿ ವಿಧೇಯಕ ಮಂಡನೆ
ಪ್ಯಾರಿಸ್ : ತಲೆಕೂದಲಿನ ಸ್ವರೂಪವನ್ನು ಆಧರಿಸಿ ನೌಕರರಿಗೆ ಉದ್ಯೋಗದ ಸ್ಥಳದಲ್ಲಿ ತಾರತಮ್ಯ ಮಾಡುವುದನ್ನು ತಡೆಗಟ್ಟುವ ಕುರಿತ ವಿಧೇಯಕದ ಮೇಲಿನ ಚರ್ಚೆಯು ಫ್ರಾನ್ಸ್ ಸಂಸತ್ನಲ್ಲಿ ಗುರುವಾರ ಆರಂಭಗೊಂಡಿತು. ನೈಸರ್ಗಿಕವಾಗಿ ಕಪ್ಪು ಕೂದಲನ್ನು ಹೊಂದಿರುವ ಕಪ್ಪುವರ್ಣೀಯ ಮಹಿಳೆಯರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಈ ವಿಧೇಯಕವನ್ನು ರೂಪಿಸಲಾಗಿದೆಯೆಂದು, ಕಾನೂನನ್ನು ಬೆಂಬಲಿಸುವ ಸಂಸದರು ಹೇಳುತ್ತಾರೆ.
ಉದ್ಯೋಗಿಯ ಕೇಶವಿನ್ಯಾಸ, ವರ್ಣ,ಕೂದಲಿನ ಉದ್ದ ಹಾಗೂ ವಿನ್ಯಾಸವನ್ನು ಆಧರಿಸಿ ಕೆಲಸದ ಸ್ಥಳದಲ್ಲಿ ಯಾವುದೇ ರೀತಿಯ ತಾರತಮ್ಯವನ್ನು ಎಸಗುವುದಕ್ಕೆ ದಂಡವನ್ನು ವಿಧಿಸುವುದಕ್ಕೆ ಈ ವಿಧೇಯಕದಲ್ಲಿ ಅವಕಾಶವಿದೆಯೆಂದು, ಅದನ್ನು ಸದನದಲ್ಲಿ ಪ್ರಾಯೋಜಿಸಿದ ಸಂಸದ ಓಲಿವಿಯರ್ ಸೆರ್ವಾ ಹೇಳುತ್ತಾರೆ.
ಫ್ರಾನ್ಸ್ನಲ್ಲಿ ಉದ್ಯೋಗ ಸಂದರ್ಶನಗಳಿಗೆ ಮೊದಲು ಆಫ್ರಿಕನ್ ಮೂಲದ ಮಹಿಳೆಯರಿಗೆ ಅವರ ತಲೆಗೂದಲ ವಿನ್ಯಾಸವನ್ನು ಬದಲಾಯಿಸುವಂತೆ ಉತ್ತೇಜಿಸಲಾಗುತ್ತಿದೆಯೆಂದು ಕಪ್ಪು ಜನಾಂಗೀಯರಾದ ಸೆರ್ವಾ ಹೇಳಿದ್ದಾರೆ.
ಅಮೆರಿಕದ 20 ರಾಜ್ಯಗಳಲ್ಲಿಯೂ ಇದೇ ರೀತಿಯ ಕಾನೂನುಗಳು ಅಸ್ತಿತ್ವದಲ್ಲಿದ್ದು, ತಲೆಕೂದಲಿನ ಸ್ವರೂಪದ ಆಧಾರದಲ್ಲಿ ತಾರತಮ್ಯವನ್ನು ಎಸಗುವುದು ಜನಾಂಗೀಯವಾದದ ಅಭಿವ್ಯಕ್ತಿಯೆಂದು ಪರಿಗಣಿಸಲಾಗಿದೆ. ಬ್ರಿಟನ್ ದೇಶದಲ್ಲಿಯೂ ಮಾನವಹಕ್ಕುಗಳ ಆಯೋಗವು ಶಾಲೆಗಳಲ್ಲಿ ತಲೆಕೂದಲಿನ ಆಧಾರದಲ್ಲಿ ತಾರತಮ್ಯವನ್ನು ಎಸಗುವುದರ ವಿರುದ್ಧ ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೊಳಿಸಿವೆ.