×
Ad

ಇಸ್ರೇಲ್ ನಿಂದ ಮುಂದುವರಿದ ವೈಮಾನಿಕ ದಾಳಿ: ಅತಂತ್ರ ಸ್ಥಿತಿಯಲ್ಲಿ ಗಾಝಾ

Update: 2025-11-26 22:17 IST

Photo Credit : aljazeera.com

ಗಾಝಾ: ಅಕ್ಟೋಬರ್ ತಿಂಗಳಲ್ಲಿ ಇಸ್ರೇಲ್ ಹಾಗೂ ಹಮಾಸ್ ನಡುವೆ ಕದನ ವಿರಾಮವೇರ್ಪಟ್ಟ ನಂತರ, ಗಾಝಾದ ಮೇಲೆ ಇಸ್ರೇಲ್ ಸಾರಿದ್ದ ಯುದ್ಧ ಬಹುತೇಕ ಅಂತ್ಯಗೊಂಡಿತು ಎಂದೇ ಫೆಲೆಸ್ತೀನಿಯನ್ನರು ಭಾವಿಸಿದ್ದರು. ಆದರೆ, ಹಮಾಸ್ ಕದನ ವಿರಾಮ ಉಲ್ಲಂಘಿಸಿದೆ ಎಂದು ಆರೋಪಿಸಿ ಇಸ್ರೇಲ್ ಪುನಾರಂಭಿಸಿರುವ ವೈಮಾನಿಕ ದಾಳಿಯಲ್ಲಿ ಇಲ್ಲಿಯವರೆಗೆ 342 ಫೆಲೆಸ್ತೀನ್ ನಾಗರಿಕರು ಮೃತಪಟ್ಟಿದ್ದು, ಈ ಪೈಕಿ 67 ಮಕ್ಕಳು ಸೇರಿದ್ದಾರೆ.

ಕದನ ವಿರಾಮದ ನಂತರ, ಹೊಸದಾಗಿ ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದ ಫೆಲೆಸ್ತೀನಿಯನ್ನರು ಇಸ್ರೇಲ್ ನ ವೈಮಾನಿಕ ದಾಳಿಯಿಂದ ಕಂಗಾಲಾಗಿದ್ದು, “ಇದು ಕದನ ವಿರಾಮವಲ್ಲ; ನಮ್ಮ ಪಾಲಿನ ದುಃಸ್ವಪ್ನ” ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.

ಇಸ್ರೇಲ್ ವೈಮಾನಿಕ ದಾಳಿಯ ದುಃಸ್ವಪ್ನದ ಕುರಿತು ತಮ್ಮ ಅನುಭವ ಹಂಚಿಕೊಳ್ಳುವ ಫೈಕ್ ಅಜೌರ್, “ನಾನು ಪವಾಡಸದೃಶವಾಗಿ ಬದುಕುಳಿದೆ. ನಾನು ಆಗಷ್ಟೇ ಬೀದಿಯನ್ನು ದಾಟಿದ್ದೆ. ಹತ್ತಿರದ ತರಕಾರಿ ಅಂಗಡಿಯಿಂದ ಮನೆಗೆ ಒಂದಿಷ್ಟು ಸಾಮಗ್ರಿಗಳನ್ನು ಕೊಂಡುಕೊಳ್ಳಲೆಂದು ತೆರಳಿದಾಗ, ನನ್ನ ಮನೆಯ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿತ್ತು” ಎಂದು ಸ್ಮರಿಸುತ್ತಾರೆ.

“ಆದರೆ ಇದಷ್ಟೇ ವಿಷಯವಾಗಿರಲಿಲ್ಲ. ನಾನು ನನ್ನ ಮನೆಗೆ ಓಡಿ ಬಂದಾಗ, ನನ್ನ ಕುಟುಂಬದ ಸದಸ್ಯರಿಗೆ ದೈಹಿಕವಾಗಿ ಯಾವುದೇ ತೊಂದರೆಯಾಗಿರಲಿಲ್ಲ. ಆದರೆ, ನನ್ನ ಮೂವರು ಕಿರಿಯ ಪುತ್ರಿಯರು ಭಯದಿಂದ ಆಘಾತಕ್ಕೊಳಗಾಗಿದ್ದರು. ಅಕ್ಟೋಬರ್ ನಿಂದ ಜಾರಿಗೆ ಬಂದಿದ್ದ ಕದನ ವಿರಾಮ ಅಂತ್ಯಗೊಂಡು, ಗಾಝಾ ಮೇಲಿನ ಜನಾಂಗೀಯ ಹತ್ಯೆ ಮತ್ತೆ ಪ್ರಾರಂಭಗೊಂಡಿರಬಹುದು ಎಂದು ಗಾಬರಿಗೊಳಗಾಗಿದ್ದರು” ಎಂದು ಅವರು ಹೇಳುತ್ತಾರೆ.

ಕದನ ವಿರಾಮ ಪ್ರಾರಂಭಗೊಂಡಾಗಿನಿಂದ, ಹಮಾಸ್ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಇಸ್ರೇಲ್ ಪದೇ ಪದೇ ಗಾಝಾ ಮೇಲೆ ದಾಳಿ ನಡೆಸುತ್ತಿದೆ. ಆದರೆ, ಈ ಆರೋಪವನ್ನು ಅಲ್ಲಗಳೆದಿರುವ ಹಮಾಸ್, ಕದನ ವಿರಾಮ ಪ್ರಾರಂಭಗೊಂಡಾಗಿನಿಂದ ಇಲ್ಲಿಯವರೆಗೆ 500 ಬಾರಿ ಕದನ ವಿರಾಮವನ್ನು ಉಲ್ಲಂಘಿಸಿರುವ ಇಸ್ರೇಲ್, ತನ್ನ ವೈಮಾನಿಕ ದಾಳಿಯಲ್ಲಿ 67 ಮಕ್ಕಳು ಸೇರಿದಂತೆ ಒಟ್ಟು 342 ಫೆಲೆಸ್ತೀನ್ ನಾಗರಿಕರನ್ನು ಹತ್ಯೆಗೈದಿದೆ.

ಈ ಪೈಕಿ, ಶನಿವಾರ ಗಾಝಾ ಪಟ್ಟಿಯಾದ್ಯಂತ ಹತ್ಯೆಗೀಡಾದ 24 ಮಂದಿಯ ಪೈಕಿ, ಫೈಕ್ ಅಜೌರ್ ವಾಸಿಸುತ್ತಿರುವ ಗಾಝಾದ ಅಲ್-ಅಬ್ಬಾಸ್ ಪ್ರದೇಶದಲ್ಲಿನ ನಿವಾಸಿಗಳು ಸೇರಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸುವ ಫೈಕ್ ಅಜೌರ್, “ಇದು ಕದನ ವಿರಾಮವಲ್ಲ; ಇದು ದುಃಸ್ವಪ್ನವಾಗಿದೆ. ಒಂದು ಕ್ಷಣದ ಶಾಂತ ವಾತಾವರಣದ ಬಳಿಕ, ಇದು ಮತ್ತೆ ಯುದ್ಧವೇನೊ ಎಂಬ ಸ್ಥಿತಿಗೆ ಜೀವನ ಮರಳುತ್ತಿದೆ” ಎಂದು ಅಳಲು ತೋಡಿಕೊಳ್ಳುತ್ತಾರೆ.

“ನೀವು ಈ ಪ್ರದೇಶದಾದ್ಯಂತ ದೇಹದ ಭಾಗಗಳು, ಹೊಗೆ, ಒಡೆದು ಹೋದ ಗಾಜು, ಹತ್ಯೆಗೀಡಾದ ಜನರು, ಆ್ಯಂಬುಲೆನ್ಸ್ ಗಳನ್ನು ಕಾಣಬಹುದು. ಈ ದೃಶ್ಯಗಳ ಆಘಾತದಿಂದ ನಾವೀಗಲೂ ಹೊರ ಬಂದಿಲ್ಲ ಮತ್ತು ಅವು ನಮ್ಮ ನೆನಪುಗಳಿಂದ ಅಳಿಸಿ ಹೋಗುತ್ತಿಲ್ಲ” ಎಂದು ಅವರು ಹೇಳಿದರು.

ಮೂಲತಃ ಪೂರ್ವ ಗಾಝಾ ನಗರದ ನೆರೆಯ ತುಫಾದವರಾದ 29 ವರ್ಷದ ಫೈಕ್ ಅಜೌರ್, ಯುದ್ಧದ ವೇಳೆ ಸಾಕಷ್ಟು ಘಾಸಿಗೊಳಗಾಗಿದ್ದಾರೆ. ಫೈಕ್ ಅಜೌರ್ ಕುಟುಂಬಸ್ಥರು ವಾಸಿಸುತ್ತಿದ್ದ ಮನೆಯ ಮೇಲೆ ಫೆಬ್ರವರಿ 2024ರಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಅವರು ತಮ್ಮ ಪೋಷಕರು, ತಮ್ಮ ಸಹೋದರನ ಮಕ್ಕಳು ಸೇರಿದಂತೆ ತಮ್ಮ ಅವಿಭಜಿತ ಕುಟುಂಬದ 30 ಮಂದಿ ಸದಸ್ಯರನ್ನು ಈವರೆಗೆ ಕಳೆದುಕೊಂಡಿದ್ದಾರೆ. ಈ ವೈಮಾನಿಕ ದಾಳಿಯಲ್ಲಿ ಅವರ ಪತ್ನಿ ಕೂಡಾ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯ ಒಂದು ಬೆರಳನ್ನು ವೈದ್ಯರು ಕತ್ತರಿಸಬೇಕಾಗಿ ಬಂದಿದೆ. ಕದನ ವಿರಾಮದ ನಂತರ ಗಾಝಾಗೆ ಮರಳಿರುವ ಬಹುತೇಕ ಫೆಲೆಸ್ತೀನಿಯನ್ನರ ಪರಿಸ್ಥಿತಿಯೂ ಇದೇ ರೀತಿ ಇದೆ.

ಸೌಜನ್ಯ: aljazeera.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News