×
Ad

ಗಾಝಾದ ಮೇಲೆ ತಕ್ಷಣವೇ ಪ್ರಬಲ ದಾಳಿ ನಡೆಸಿ: ನೆತನ್ಯಾಹು ಆದೇಶ

ಕದನ ವಿರಾಮ ಉಲ್ಲಂಘನೆ ಆರೋಪ

Update: 2025-10-28 22:51 IST

ಬೆಂಜಮಿನ್ ನೆತನ್ಯಾಹು | Photo Credit : PTI

ಜೆರುಸಲೇಮ್, ಅ.28: ಗಾಝಾದ ಮೇಲೆ ಶಕ್ತಿಯುತವಾಗಿ ತಕ್ಷಣವೇ ದಾಳಿಗಳನ್ನು ನಡೆಸುವಂತೆ ಸೇನೆಗೆ ಆದೇಶಿಸಿರುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಪ್ರಕಟಿಸಿದೆ. ಹಮಾಸ್ ಕದನ ವಿರಾಮ ಒಪ್ಪಂದವನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ ಎಂದು ನೆತನ್ಯಾಹು ಆರೋಪಿಸಿದ್ದಾರೆ.

ಅಕ್ಟೋಬರ್ 10 ರಂದು ಜಾರಿಗೆ ಬಂದ ಕದನ ವಿರಾಮದ ಬಳಿಕವೂ ಗಾಝಾದಲ್ಲಿ ಗುಂಡಿನ ದಾಳಿ, ಸ್ಫೋಟ ಹಾಗೂ ಡ್ರೋನ್ ದಾಳಿಗಳು ಮುಂದುವರಿದಿದ್ದು, “ಈ ವಿರಾಮ ಎಷ್ಟು ದುರ್ಬಲವಾಗಿದೆ ಎಂಬುದರ ನಿದರ್ಶನ” ಎಂದು Aljazeeraವು ಗಾಝಾ ನಗರದಿಂದ ವರದಿ ಮಾಡಿದೆ.

ಫೆಲೆಸ್ತೀನ್ ಸರ್ಕಾರಿ ಮಾಧ್ಯಮ ಕಚೇರಿಯ ಪ್ರಕಾರ, ಕದನ ವಿರಾಮ ಜಾರಿಗೆ ಬಂದ ಬಳಿಕ ಇಸ್ರೇಲ್ 125 ಬಾರಿ ಉಲ್ಲಂಘನೆ ಮಾಡಿದ್ದು, ಇದರಲ್ಲಿ 94 ಫೆಲೆಸ್ತೀನಿಯರು ಸಾವನ್ನಪ್ಪಿದ್ದಾರೆ.

2023ರ ಅಕ್ಟೋಬರ್‌ನಲ್ಲಿ ಪ್ರಾರಂಭವಾದ ಇಸ್ರೇಲ್-ಹಮಾಸ್ ಯುದ್ಧದಿಂದ ಇಂದಿನವರೆಗೆ 68,527 ಮಂದಿ ಫೆಲೆಸ್ತೀನಿಯರು ಸಾವನ್ನಪ್ಪಿದ್ದು, 1,70,395 ಮಂದಿ ಗಾಯಗೊಂಡಿದ್ದಾರೆ. ಅಕ್ಟೋಬರ್ 7, 2023 ರಂದು ಹಮಾಸ್ ನಡೆಸಿದ ದಾಳಿಯಲ್ಲಿ 1,139 ಇಸ್ರೇಲಿಯರು ಮೃತಪಟ್ಟಿದ್ದು, 200 ಜನರನ್ನು ಅಪಹರಿಸಲಾಗಿತ್ತು

ನೆತನ್ಯಾಹು ಅವರ ಹೊಸ ಆದೇಶದ ನಂತರ ಗಾಝಾದ ಮೇಲೆ ದಾಳಿ ಯಾವಾಗ ಮತ್ತು ಎಲ್ಲಿ ನಡೆಯಲಿದೆ ಎಂಬುದರ ಕುರಿತು ಇನ್ನೂ ಸ್ಪಷ್ಟತೆ ಇಲ್ಲ. ಆದರೆ ಇಸ್ರೇಲ್ ಸರ್ಕಾರದ ಪ್ರಕಾರ, ಹಮಾಸ್ ಕದನ ವಿರಾಮವನ್ನು ಉಲ್ಲಂಘಿಸಿ, ಗಾಝಾದೊಳಗೆ ಉಳಿದಿರುವ 13 ಬಂಧಿತರ ಶವಗಳನ್ನು ಹಸ್ತಾಂತರಿಸದಿರುವುದು ಈ ಕ್ರಮಕ್ಕೆ ಕಾರಣ ಎನ್ನಲಾಗಿದೆ.

ಹಮಾಸ್ ತನ್ನ ಶೋಧ ತಂಡಗಳಿಗೆ ಭಾರೀ ಯಂತ್ರೋಪಕರಣ ಮತ್ತು ನೆರವಿನ ಅಗತ್ಯವಿದೆ ಎಂದು ಹೇಳಿಕೊಂಡಿದೆ. ಇಸ್ರೇಲ್ ಕೆಲವು ಯಂತ್ರೋಪಕರಣಗಳನ್ನು ಬಳಸಲು ಅನುಮತಿಸಿದರೂ, ಎಲ್ಲ ಶವಗಳೂ ಹೊರತೆಗೆದಿಲ್ಲ ಎಂದು ತಿಳಿದು ಬಂದಿದೆ. ಗಾಝಾದ ದಕ್ಷಿಣ ಭಾಗವಾದ ರಫಾದಲ್ಲಿ ಭಾರೀ ಗುಂಡಿನ ಚಕಮಕಿ ಮತ್ತು ಸ್ಫೋಟಗಳು ನಡೆದಿರುವ ವರದಿಗಳು ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸಿವೆ.

ಹಮಾಸ್ ಹಿಂದಿರುಗಿಸಿದ ಶವಗಳು ಬಂಧಿತರದ್ದಲ್ಲ, ಎರಡು ವರ್ಷಗಳ ಹಿಂದೆ ಪತ್ತೆಯಾದ ಅಪಹರಣಕಾರರದ್ದಾಗಿವೆ ಎಂದು ಇಸ್ರೇಲ್ ಆರೋಪಿಸಿದೆ. ಹಮಾಸ್ ಶವ ಹಸ್ತಾಂತರವನ್ನು “ಪ್ರದರ್ಶನ” ಎಂದು ಇಸ್ರೇಲ್ ಟೀಕಿಸಿದ್ದು, ಡ್ರೋನ್ ದೃಶ್ಯಾವಳಿಗಳ ಆಧಾರದಲ್ಲಿ ಹಮಾಸ್ ರೆಡ್ ಕ್ರಾಸ್ ಸಮ್ಮುಖದಲ್ಲಿ ಶವಗಳನ್ನು ಸ್ಥಳಾಂತರಿಸಿದೆ ಎಂದು ಹೇಳಿದೆ.

ಹಮಾಸ್ ತನ್ನ ಶೋಧ ಕಾರ್ಯಕ್ಕೆ ಇಸ್ರೇಲ್ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದೆ. ಭಾರೀ ಯಂತ್ರೋಪಕರಣ ಮತ್ತು ರೆಡ್ ಕ್ರಾಸ್ ಸಿಬ್ಬಂದಿಗೆ ಗಾಝಾದ ಪ್ರಮುಖ ಪ್ರದೇಶಗಳಿಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ತಿಳಿಸಿದೆ.

ಸ್ಥಳೀಯ ಸಮಯ ರಾತ್ರಿ 8 ಗಂಟೆಗೆ (18:00 GMT) ಮತ್ತೊಬ್ಬ ಇಸ್ರೇಲ್ ಬಂಧಿತರ ಶವವನ್ನು ಹಸ್ತಾಂತರಿಸಲಾಗುವುದು ಎಂದು ಹಮಾಸ್ ಘೋಷಿಸಿತ್ತು, ಆದರೆ ಬಳಿಕ ಆ ನಿರ್ಧಾರವನ್ನು ಮುಂದೂಡಲಾಯಿತು.

ಇಸ್ರೇಲ್‌ನ “ತಕ್ಷಣದ ಕ್ರಮ”ದ ಸೂಚನೆಯೊಂದಿಗೆ ಗಾಝಾದ ಪರಿಸ್ಥಿತಿ ಮತ್ತೊಮ್ಮೆ ಉದ್ವಿಗ್ನಗೊಂಡಿದ್ದು, ಮಧ್ಯಪ್ರಾಚ್ಯದಲ್ಲಿ ಹೊಸದಾಗಿ ಹಿಂಸಾಚಾರದ ಭೀತಿ ಆವರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News