×
Ad

ಹಾಂಕಾಂಗ್ ಅಗ್ನಿ ದುರಂತ: ಮಡಿದವರ ಸಂಖ್ಯೆ 94ಕ್ಕೆ ಏರಿಕೆ

Update: 2025-11-28 07:42 IST

PC: x.com/zetoaye

ಹಾಂಕಾಂಗ್: ನಗರದ ವಾಂಗ್ ಫುಕ್ಕೋರ್ಟ್ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ ನ ಹಲವು ಬಹುಮಹಡಿ ಕಟ್ಟಡಗಳನ್ನು ವ್ಯಾಪಿಸಿದ ಬೆಂಕಿಯ ಕೆನ್ನಾಲಿಗೆಯನ್ನು ತಹಬಂದಿಗೆ ತರುವ ನಿಟ್ಟಿನಲ್ಲಿ ಅಗ್ನಿಶಾಮಕ ದಳ ಸತತ ಎರಡನೇ ದಿನವೂ ಪ್ರಯತ್ನ ಮುಂದುವರಿಸಿರುವ ನಡುವೆಯೇ ದುರಂತದಲ್ಲಿ ಮಡಿದವರ ಸಂಖ್ಯೆ 94ಕ್ಕೇರಿದೆ. ಇದು ಇತ್ತೀಚಿನ ದಶಕದಲ್ಲೇ ನಗರದಲ್ಲಿ ಸಂಭವಿಸಿದ ಅತ್ಯಂತ ಭೀಕರ ದುರಂತವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಥೈ ಪೋ ಜಿಲ್ಲೆಯ ಫ್ಲಾಟ್ ಗಳಲ್ಲಿ ಸುಟ್ಟು ಕರಕಲಾಗಿರುವವರ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಗುರುವಾರ ಕೂಡಾ ಮೇಲ್ಮಹಡಿಗಳಿಂದ ದಟ್ಟವಾದ ಹೊಗೆ ಹೊಮ್ಮುತ್ತಿದೆ. ಪರಿಹಾರ ಕಾರ್ಯಾಚರಣೆ ತಂಡದವರು ಪ್ರತಿ ಫ್ಲಾಟ್ ಗಳಲ್ಲಿ ಮತ್ತು ಅವಶೇಷಗಳಡಿ ಶೋಧಕಾರ್ಯ ಮುಂದುವರಿಸಿದ್ದಾರೆ. ಬುಧವಾರ ಮಧ್ಯಾಹ್ನ 32 ಮಹಡಿಗಳ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಇಡೀ ಸಂಕೀರ್ಣಕ್ಕೆ ವ್ಯಾಪಿಸಿತ್ತು.

"ನಮ್ಮ ಅಗ್ನಿಶಾಮಕ ಕಾರ್ಯಾಚರಣೆ ಬಹುತೇಕ ಪೂರ್ಣಗೊಂಡಿದೆ" ಎಂದು ಅಗ್ನಿಶಾಮಕ ಸೇವಾ ಕಾರ್ಯಾಚರಣೆಗಳ ಉಪನಿರ್ದೇಶಕ ಡೆರಿಕ್ ಆರ್ಮ್ಸ್ಟ್ರಾಂಗ್ ಚಾನ್ ಹೇಳಿದ್ದಾರೆ. ಅವಶೇಷಗಳಿಂದ ಮತ್ತೆ ಬೆಂಕಿ ಹರಡುವುದನ್ನು ತಡೆಯಲು ನಮ್ಮ ಸಿಬ್ಬಂದಿ ಶ್ರಮಿಸುತ್ತಿದ್ದು, ಶೋಧ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ವಿವರಿಸಿದ್ದಾರೆ. ಬೆಂಕಿ ಹರಡುವ ವೇಗ, ಕಾರ್ಯಾಚರಣೆಗೆ ಪ್ರಮುಖ ತಡೆಯಾಗಿ ಪರಿಣಮಿಸಿದ್ದು, ನೆರವಿಗಾಗಿ ನಿರಂತರ ಕರೆಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಹಲವು ಮಂದಿ ರಕ್ಷಣಾ ಕಾರ್ಯಕ್ಕೆ ಧಾವಿಸಬೇಕಾಯಿತು ಎಂದರು.

ಮೇಲಿನ ಮಹಡಿಗಳಿಂದ ಅವಶೇಷಗಳು ಹಾಗೂ ಸ್ಕ್ಯಾಫೋಲ್ಡಿಂಗ್ ಗಳು ಬೀಳುತ್ತಿದ್ದು, ತುರ್ತು ವಾಹನಗಳು ಘಟನಾ ಸ್ಥಳ ತಲುಪಲು ಸಾಧ್ಯವಾಗುತ್ತಿಲ್ಲ. ಬಿದ್ದಿರುವ ಸ್ಕ್ಯಾಫೋಲ್ಡಿಂಗ್ ಹಾಗೂ ನಿರ್ಮಾಣ ವಸ್ತುಗಳಿಂದಾಗಿ ತಡೆ ಉಂಟಾಗಿದೆ ಎಂದು ಹೇಳಿದ್ದಾರೆ. ಭಾರೀ ಬಿಸಿ ಹಾಗೂ ಕಗ್ಗತ್ತಲು ಕಾರ್ಯಾಚರಣೆ ಪ್ರಗತಿಗೆ ತಡೆಯಾಗಿವೆ. ಸಿಕ್ಕಿಹಾಕಿಕೊಂಡಿರುವವರ ರಕ್ಷಣೆಗೆ ಸೀಮಿತ ಗೋಚರತೆಯಲ್ಲಿ ಹರಸಾಹಸ ಮಾಡಬೇಕಿದೆ. ದಟ್ಟವಾದ ಹೊಗೆ ತುಂಬಿದ ಕೊಠಡಿಗಳಿಂದ ಜನರನ್ನು ಕರೆ ತರುವ ಪ್ರಯತ್ನವನ್ನು ಪರಿಹಾರ ಸಿಬ್ಬಂದಿ ಮಾಡುತ್ತಿರುವ ವಿಡಿಯೊಗಳು ವೈರಲ್ ಆಗಿವೆ.

11 ಮಂದಿ ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಕನಿಷ್ಠ 76 ಮಂದಿ ಗಾಯಗೊಂಡಿದ್ದಾರೆ. 12 ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ಇತರ 28 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News