×
Ad

ನಾಗರಿಕರ ರಕ್ಷಣೆಯಲ್ಲಿ ನೆತನ್ಯಾಹು ವಿಫಲ: ಒತ್ತೆಯಾಳು ಇಸ್ರೇಲಿಯನ್‌ ಮಹಿಳೆಯರ ಆರೋಪ

Update: 2023-10-31 18:45 IST

Screengrab: X/@RonEng1ish

ಟೆಲ್‌ ಅವೀವ್: ಮೂವರು ಇಸ್ರೇಲಿ ಮಹಿಳಾ ಒತ್ತೆಯಾಳುಗಳ ವೀಡಿಯೋವನ್ನು ಹಮಾಸ್‌ ಬಿಡುಗಡೆಗೊಳಿಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಇಸ್ರೇಲಿ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಇದು “ಬರ್ಬರ ಮಾನಸಿಕ ಪ್ರಚಾರ” ಎಂದಿದ್ದಾರೆ.

ಹಮಾಸ್‌ ದಾಳಿ ವೇಳೆ ತನ್ನ ನಾಗರಿಕರನ್ನು ರಕ್ಷಿಸಲು ನೆತನ್ಯಾಹು ಅವರು ವಿಫಲರಾಗಿದ್ದಾರೆ ಎಂದು ವೀಡಿಯೋದಲ್ಲಿ ಕಾಣಿಸಿಕೊಂಡಿರುವ ಮೂವರು ಮಹಿಳೆಯರು ಆಕ್ರೋಶಭರಿತರಾಗಿ ಪ್ರತಿಕ್ರಿಯಿಸಿದ್ದಾರೆ.

ತಮ್ಮನ್ನು ಬಿಡುಗಡೆಗೊಳಿಸದೇ ಇರುವುದಕ್ಕೆ ಆಕ್ರೋಶ ಹೊರಹಾಕಿದ ಈ ಮಹಿಳೆಯರು ಫೆಲೆಸ್ತೀನಿ ಕೈದಿಗಳಿಗೆ ಪ್ರತಿಯಾಗಿ ತಮ್ಮನ್ನು ಬಿಡುಗಡೆಗೊಳಿಸುವಂತೆ ಕೋರಿದ್ದಾರೆ.

“ನೀವು ನಮ್ಮನ್ನು ಬಿಡುಗಡೆಗೊಳಿಸಬೇಕಿತ್ತು. ನಮ್ಮನ್ನು ಬಿಡುಗಡೆಗೊಳಿಸುವುದಾಗಿ ಮಾತು ನೀಡಿದ್ದೀರಿ. ಆದರೆ ಬದಲಿಗೆ ನಿಮ್ಮ ರಾಜಕೀಯ, ಮಿಲಿಟರಿ ಮತ್ತು ರಾಜತಾಂತ್ರಿಕ ವೈಫಲ್ಯವನ್ನು ನಾವು ಹೊತ್ತುಕೊಳ್ಳುವಂತಾಗಿದೆ,” ಎಂದು ಅವರು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆಯಾಗಿ ಹೇಳಿಕೆ ಬಿಡುಗಡೆಗೊಳಿಸಿದ ನೆತನ್ಯಾಹು, ಪ್ರತಿ ಒತ್ತೆಯಾಳನ್ನು ಬಿಡುಗಡೆಗೊಳಿಸುವ ಕುರಿತು ತಾವು ಮಾಡಿರುವ ಪ್ರತಿಜ್ಞೆಯನ್ನು ಪುನರುಚ್ಛರಿಸಿದ್ದಾರೆ.

“ಯುದ್ಧಾಪರಾಧಗಳನ್ನು ಮಾಡಿರುವ ಹಮಾಸ್‌ನಿಂದ ಅಪಹರಣಕ್ಕೊಳಗಾಗಿದ್ದೀರಿ. ನಮ್ಮ ಹೃದಯಗಳು ನಿಮಗಾಗಿ ಮತ್ತು ಇತರ ಒತ್ತೆಯಾಳುಗಳಿಗಾಗಿ ಮಿಡಿಯುತ್ತಿದೆ. ನಿಮ್ಮನ್ನು ಮತ್ತು ಇತರ ಒತ್ತೆಯಾಳುಗಳನ್ನು ವಾಪಸ್‌ ಕರೆತರಲು ನಾವು ಸರ್ವ ಪ್ರಯತ್ನ ಮಾಡುತ್ತಿದ್ದೇವೆ,” ಎಂದು ನೆತನ್ಯಾಹು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News