×
Ad

ಐಸಿಸಿ ಬಂಧನ ವಾರಂಟ್ ಹಿನ್ನೆಲೆ : ಬಳಸು ದಾರಿ ಮೂಲಕ ನ್ಯೂಯಾರ್ಕ್‌ಗೆ ತೆರಳಿದ ಇಸ್ರೇಲ್ ಪ್ರಧಾನಿ ನೆತನ್ಯಾಹು

Update: 2025-09-25 20:24 IST

ಜೆರುಸಲೇಂ, ಸೆ.25: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ವಿಮಾನವು ಗುರುವಾರ ವಾಡಿಕೆಯಲ್ಲದ ಮಾರ್ಗದ ಮೂಲಕ ನ್ಯೂಯಾರ್ಕ್ ತಲುಪಿದೆ. ಐಸಿಸಿ ಬಂಧನ ವಾರಂಟ್ ಎದುರಿಸುತ್ತಿರುವ ನೆತನ್ಯಾಹು ಹಲವಾರು ಯುರೋಪಿಯನ್ ರಾಷ್ಟ್ರಗಳ ವಾಯುಮಾರ್ಗವನ್ನು ತಪ್ಪಿಸಿಕೊಂಡು ಬಳಸು ದಾರಿಯ ಮೂಲಕ ವಿಶ್ವಸಂಸ್ಥೆ ಸಾಮಾನ್ಯ ಸಭೆ ನಡೆಯುತ್ತಿರುವ ನ್ಯೂಯಾರ್ಕ್‌ಗೆ ಆಗಮಿಸಿರುವುದಾಗಿ ವರದಿಯಾಗಿದೆ.

ಇಸ್ರೇಲ್‌ಗೆ ತನ್ನ ವಾಯುಮಾರ್ಗವನ್ನು ಬಳಸಲು ಫ್ರಾನ್ಸ್ ಅನುಮತಿ ನೀಡಿದ್ದರೂ ನೆತನ್ಯಾಹು ಅವರಿದ್ದ ವಿಮಾನವು ದಕ್ಷಿಣದ ಮಾರ್ಗದ ಮೂಲಕ ಸಾಗಿರುವುದು ವಿಮಾನಗಳ ಹಾರಾಟದ ಮೇಲೆ ನಿಗಾ ಇರಿಸುವ ವ್ಯವಸ್ಥೆ ದೃಢಪಡಿಸಿದೆ ಎಂದು ಫ್ರಾನ್ಸ್ ಸರಕಾರದ ಮೂಲಗಳನ್ನು ಉಲ್ಲೇಖಿಸಿ ಎಎಫ್‌ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಸಾಮಾನ್ಯವಾಗಿ ಟೆಲ್ ಅವೀವ್‌ನಿಂದ ನ್ಯೂಯಾರ್ಕ್‌ಗೆ ವಿಮಾನಗಳು ಫ್ರಾನ್ಸ್, ಸ್ಪೇನ್, ಇಟಲಿ ಮತ್ತು ಗ್ರೀಸ್ ಇತ್ಯಾದಿ ಹಲವು ಯುರೋಪಿಯನ್ ರಾಷ್ಟ್ರಗಳ ಮೂಲಕ ಸಾಗುತ್ತವೆ. ಆದರೆ ನೆತನ್ಯಾಹು ಅವರಿದ್ದ ವಿಮಾನವು ಗ್ರೀಸ್ ಮತ್ತು ಇಟಲಿಯನ್ನು ದಾಟಿದ ಬಳಿಕ ಅಟ್ಲಾಂಟಿಕ್‌ನಾದ್ಯಂತ ಹೋಗುವ ಮೊದಲು ಜಿಬ್ರಾಲ್ಟರ್ ಜಲಸಂಧಿಯ ಮೂಲಕ ದಕ್ಷಿಣಕ್ಕೆ ತಿರುಗಿದೆ. ರೋಮ್ ಕಾನೂನಿಗೆ ಸಹಿ ಹಾಕಿರುವ ರಾಷ್ಟ್ರಗಳನ್ನು ದೂರವಿಡುವುದು ನೆತನ್ಯಾಹು ಅವರ ವಿಮಾನದ ಉದ್ದೇಶವಾಗಿದೆ ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ. ಈ ರಾಷ್ಟ್ರಗಳಲ್ಲಿ ವಿಮಾನವು ತುರ್ತು ಲ್ಯಾಂಡಿಂಗ್ ನಡೆಸಿದರೆ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್(ಐಸಿಸಿ) ಹೊರಡಿಸಿದ ಬಂಧನ ವಾರಾಂಟ್ ಜಾರಿಗೊಳಿಸಬಹುದು. ಗಾಝಾದಲ್ಲಿ ಇಸ್ರೇಲ್‌ನ ಮಿಲಿಟರಿ ಕಾರ್ಯಾಚರಣೆಯ ಸಂದರ್ಭ ಆಪಾದಿತ ಯುದ್ಧಾಪರಾಧಗಳ ಹಿನ್ನೆಲೆಯಲ್ಲಿ ಐಸಿಸಿ ನವೆಂಬರ್‌ನಲ್ಲಿ ನೆತನ್ಯಾಹು ಮತ್ತು ಇಸ್ರೇಲ್‌ನ ಮಾಜಿ ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್ ವಿರುದ್ಧ ಬಂಧನ ವಾರಾಂಟ್ ಜಾರಿಗೊಳಿಸಿದೆ. ಐಸಿಸಿ ತನಿಖೆಯನ್ನು ಬೆಂಬಲಿಸುವುದಾಗಿ ಕಳೆದ ವಾರ ಸ್ಪೇನ್ ಘೋಷಿಸಿತ್ತು ಮತ್ತು ಗಾಝಾದಲ್ಲಿ ಆಪಾದಿತ ಮಾನವ ಹಕ್ಕುಗಳ ಉಲ್ಲಂಘನೆಗಳ ತನಿಖೆಗಾಗಿ ತಂಡವೊಂದನ್ನು ರಚಿಸಿದೆ.

ಶುಕ್ರವಾರ ವಿಶ್ವಸಂಸ್ಥೆ ಸಾಮಾನ್ಯ ಸಭೆಯನ್ನುದ್ದೇಶಿಸಿ ನೆತನ್ಯಾಹು ಮಾತನಾಡಲಿದ್ದು, ಮುಂದಿನ ವಾರ ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರನ್ನು ಭೇಟಿಯಾಗಲಿದ್ದಾರೆ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News