ಪಾಕಿಸ್ತಾನ | ಇಮ್ರಾನ್ ಖಾನ್ ಆರೋಗ್ಯದ ಕುರಿತು ವದಂತಿ; ಅಡಿಯಾಲಾ ಜೈಲಿನ ಮುಂದೆ ಉದ್ವಿಗ್ನತೆ; ವರದಿ
ಇಮ್ರಾನ್ ಖಾನ್ (File Photo: PTI)
ರಾವಲ್ಪಿಂಡಿ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು 'ಪ್ರತ್ಯೇಕ' ಬಂಧನದಲ್ಲಿದ್ದಾರೆಂಬ ವರದಿಗಳ ನಡುವೆಯೇ, ಅವರ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವದಂತಿಗಳು ಬುಧವಾರ ದೇಶದಲ್ಲಿ ರಾಜಕೀಯ ಉದ್ವಿಗ್ನತೆಯನ್ನು ಹೆಚ್ಚಿಸಿವೆ ಎಂದು indiatoday.in ವರದಿ ಮಾಡಿದೆ.
ಅಡಿಯಾಲಾ ಜೈಲಿನೊಳಗೆ ʼಇಮ್ರಾನ್ ಖಾನ್ ಅವರನ್ನು ಹತ್ಯೆ ಮಾಡಲಾಗಿದೆʼ ಎಂಬ ವಂದಂತಿ ಎಕ್ಸ್ ನಲ್ಲಿ ವ್ಯಾಪಕವಾಗಿ ಹರಡಿದೆ. ಇದನ್ನು ದೃಢಪಡಿಸುವ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಇಮ್ರಾನ್ ಖಾನ್ ಅವರ ಸಹೋದರಿಯರಾದ ನೊರೀನ್, ಅಲೀಮಾ ಮತ್ತು ಉಝ್ಮಾ ಅವರು, ತಮ್ಮ ಸಹೋದರನನ್ನು ಭೇಟಿ ಮಾಡಲು ಹಲವು ವಾರಗಳಿಂದ ಅವಕಾಶ ನೀಡಲಾಗುತ್ತಿಲ್ಲವೆಂದು ಆರೋಪಿಸಿದ್ದಾರೆ. ಜೈಲಿನಲ್ಲಿ ಕ್ರೂರವಾಗಿ ಹಲ್ಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತಪಡಿಸಿರುವ ಅವರು, ತಕ್ಷಣ ಭೇಟಿಗೆ ಅನುಮತಿ ನೀಡುವಂತೆ ಒತ್ತಾಯಿಸಿದ್ದಾರೆ.
ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿ 2023ರಿಂದ ಜೈಲಿನಲ್ಲಿರುವ 72 ವರ್ಷದ ಇಮ್ರಾನ್ ಖಾನ್, ಜೈಲು ಅಧಿಕಾರಿಗಳ ವಿರುದ್ಧ ದೌರ್ಜನ್ಯ ಮತ್ತು ಕಿರುಕುಳದ ಬಗ್ಗೆ ಹಿಂದೆ ಹಲವು ಬಾರಿ ಆರೋಪಿಸಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ “ಇಮ್ರಾನ್ ಖಾನ್ ಕೊಲೆಯಾದರು” ಎಂಬ Afghanistan Times ಎಂಬ ಹೆಸರಿನ ಖಾತೆಯಿಂದ ಬಂದ ಪೋಸ್ಟ್ ವೈರಲ್ ಆಗಿದೆ. ಆದರೆ ಇದನ್ನು ಯಾವುದೇ ಮೂಲಗಳು ಖಚಿತಪಡಿಸಿಲ್ಲ.
ವದಂತಿಗಳ ಹಿನ್ನೆಲೆಯಲ್ಲಿ, ಪಿಟಿಐ ಪಕ್ಷದ ಸಾವಿರಾರು ಬೆಂಬಲಿಗರು ಅಡಿಯಾಲಾ ಜೈಲಿನತ್ತ ಧಾವಿಸಿದ ಪರಿಣಾಮ ಪರಿಸ್ಥಿತಿ ಉದ್ವಿಗ್ನತೆಯ ಹಂತ ತಲುಪಿತು. ಜೈಲು ಆಡಳಿತ ಅಥವಾ ಪಾಕಿಸ್ತಾನ ಸರ್ಕಾರದಿಂದ ಇನ್ನೂ ಅಧಿಕೃತ ಸ್ಪಷ್ಟೀಕರಣ ಲಭ್ಯವಾಗಿಲ್ಲ ಎಂದು indiatoday.in ವರದಿ ಮಾಡಿದೆ.
ಜುಲೈನಲ್ಲಿ ಜೈಲಿನಲ್ಲಿರುವ ಸ್ಥಿತಿಗತಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ಇಮ್ರಾನ್ ಖಾನ್, ತಮಗೆ ಏನಾದರೂ ಸಂಭವಿಸಿದರೆ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ಹೊಣೆಗಾರರನ್ನಾಗಿ ಮಾಡುವಂತೆ ತಮ್ಮ ಪಕ್ಷದ ಸದಸ್ಯರಿಗೆ ಸೂಚಿಸಿದ್ದರು.
ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಅವರ ಸುರಕ್ಷತೆ ಕುರಿತು ವದಂತಿಗಳು ತೀವ್ರಗೊಂಡಿದ್ದು, ಜನತೆ ಮತ್ತು ರಾಜಕೀಯ ವಲಯಗಳು ಅಧಿಕೃತ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿವೆ ಎಂದು ತಿಳಿದು ಬಂದಿದೆ.