ಭಾರತ ರಶ್ಯದ ತೈಲ ಖರೀದಿಸುವುದು ಸಂಬಂಧಗಳಿಗೆ ಅಡ್ಡಿಯಾಗಿದೆ: ಟ್ರಂಪ್ 25% ಸುಂಕಕ್ಕೆ ವಿದೇಶಾಂಗ ಕಾರ್ಯದರ್ಶಿ ರೂಬಿಯೊ ಸಮರ್ಥನೆ
ಸಾಂದರ್ಭಿಕ ಚಿತ್ರ
ವಾಷಿಂಗ್ಟನ್, ಆ.1: ಭಾರತ-ರಶ್ಯ ಸಂಬಂಧಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ `ಭಾರತ ರಶ್ಯದಿಂದ ಅಗ್ಗದ ತೈಲ ಖರೀದಿಸುವುದು ಅಮೆರಿಕ-ಭಾರತ ನಡುವಿನ ಸಂಬಂಧಗಳಲ್ಲಿ ಕಿರಿಕಿರಿಗೆ ಕಾರಣವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಇದಕ್ಕೂ ಮುನ್ನ ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ` ಭಾರತದೊಂದಿಗಿನ ವ್ಯಾಪಾರ ಮಾತುಕತೆಯ ಬಗ್ಗೆ ಅಮೆರಿಕದ ವ್ಯಾಪಾರ ನಿಯೋಗವು ತೀವ್ರ ನಿರಾಶೆ ವ್ಯಕ್ತಪಡಿಸಿದೆ. ರಶ್ಯ-ಭಾರತ ನಡುವಿನ ಇಂಧನ ಸಂಬಂಧದ ಬಗ್ಗೆ ನಾವು ಸಮಾಧಾನ ಹೊಂದಿಲ್ಲ' ಎಂದಿದ್ದರು.
ಭಾರತದ ಮೇಲೆ 25% ಸುಂಕ ವಿಧಿಸಿದ ಬಳಿಕ ತೀವ್ರ ವಾಗ್ದಾಳಿ ನಡೆಸಿದ್ದ ಟ್ರಂಪ್ `ರಶ್ಯದೊಂದಿಗೆ ಭಾರತ ಏನು ಮಾಡುತ್ತಿದೆ ಎಂಬುದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರಿಬ್ಬರು ಜೊತೆಯಾಗಿ ತಮ್ಮ ಸತ್ತ ಆರ್ಥಿಕತೆಗಳನ್ನು ಹೂತು ಹಾಕಲಿ' ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಭಾರತದ ವಿರುದ್ಧ ಟ್ರಂಪ್ ಪ್ರತಿಕ್ರಿಯೆಯನ್ನು ಬೆಂಬಲಿಸಿರುವ ರೂಬಿಯೊ `ಭಾರತವು ಒಬ್ಬ ಮಿತ್ರ ಮತ್ತು ಕಾರ್ಯತಂತ್ರದ ಪಾಲುದಾರ. ವಿದೇಶಾಂಗ ನೀತಿಯಲ್ಲಿ ನೀವು ಯಾರನ್ನೂ 100% ಅವಲಂಬಿಸುವಂತಿಲ್ಲ. ಭಾರತ ಬೃಹತ್ ಇಂಧನ ಅಗತ್ಯವನ್ನು ಹೊಂದಿದ್ದು ತೈಲ ಮತ್ತು ಕಲ್ಲಿದ್ದಲು, ಅನಿಲ(ಗ್ಯಾಸ್)ವನ್ನು ಖರೀದಿಸುವ ಸಾಮಥ್ರ್ಯ ಹೊಂದಿದೆ. ರಶ್ಯದ ತೈಲ ಅಗ್ಗವಾಗಿರುವುದರಿಂದ ಅದು ರಶ್ಯದ ತೈಲವನ್ನು ಖರೀದಿಸುತ್ತಿದೆ. ಇದು ರಶ್ಯದ ಯುದ್ಧಕ್ಕೆ ಆರ್ಥಿಕ ನೆರವು ನೀಡಿದಂತಾಗುತ್ತದೆ. ಆದ್ದರಿಂದ ಇದು ಭಾರತದೊಂದಿಗಿನ ನಮ್ಮ ಸಂಬಂಧದಲ್ಲಿ ಕಿರಿಕಿರಿಗೆ ಕಾರಣವಾಗುವ ಅಂಶವಾಗಿದೆ' ಎಂದು ರೂಬಿಯೊರನ್ನು ಉಲ್ಲೇಖಿಸಿ `ಫಾಕ್ಸ್ ನ್ಯೂಸ್' ವರದಿ ಮಾಡಿದೆ.
ಇತರ ಹಲವಾರು ತೈಲ ಮಾರಾಟಗಾರರು ಲಭ್ಯವಿದ್ದಾಗಲೂ ಭಾರತವು ರಶ್ಯದಿಂದ ಭಾರೀ ಪ್ರಮಾಣದ ತೈಲ ಖರೀದಿ ಮುಂದುವರಿಸಿರುವುದಕ್ಕೆ ಅಧ್ಯಕ್ಷ ಟ್ರಂಪ್ ತಮ್ಮ ಅಸಮಾಧಾನ, ನಿರಾಶೆಯನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ ಎಂದು ಮಾರ್ಕೊ ರೂಬಿಯೊ ಹೇಳಿದ್ದಾರೆ.
► ಹೊಸ ಸುಂಕ ಆ.7ರಿಂದ ಜಾರಿ
ಕಾರ್ಯ ನಿರ್ವಾಹಕ ಆದೇಶದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವು ದೇಶಗಳಿಗೆ ಪರಸ್ಪರ ಸುಂಕ ದರವನ್ನು ಪರಿಷ್ಕರಿಸಿದ್ದು ಹೊಸ ಸುಂಕವು ಆಗಸ್ಟ್ 7ರಿಂದ ಜಾರಿಗೆ ಬರಲಿದೆ ಎಂದು ಘೋಷಿಸಿದ್ದಾರೆ.
ಹಲವು ದೇಶಗಳಿಂದ ಆಮದಾಗುವ ಸರಕುಗಳ ಮೇಲೆ 41%ದವರೆಗಿನ ಹೊಸ ಸುಂಕವನ್ನು ಟ್ರಂಪ್ ಘೋಷಿಸಿದ್ದು, ಹಲವಾರು ವ್ಯಾಪಾರ ಪಾಲುದಾರರೊಂದಿಗೆ ದೇಶದ ವ್ಯಾಪಾರ ಕೊರತೆಯ ಪ್ರಮಾಣವನ್ನು ಕಡಿಮೆಗೊಳಿಸಲು ಈ ತುರ್ತು ಅಧಿಕಾರವನ್ನು ಬಳಸುತ್ತಿರುವುದಾಗಿ ಹೇಳಿದ್ದಾರೆ.
ಅಮೆರಿಕದ ವ್ಯಾಪಾರ ಮಿಗತೆ(ಅಮೆರಿಕ ಆಮದು ಮಾಡಿಕೊಳ್ಳುವುದಕ್ಕಿಂತ ಹೆಚ್ಚು ರಫ್ತು ಮಾಡುತ್ತಿರುವ) ದೇಶಗಳ ಮೇಲೆ 10% ಸುಂಕ ವಿಧಿಸುವುದಾಗಿ ಶ್ವೇತಭವನದ ಮೂಲಗಳು ಗುರುವಾರ ಹೇಳಿವೆ.