×
Ad

ರಾಷ್ಟ್ರೀಯ ಸಿನೆಮಾ ಪುರಸ್ಕಾರಕ್ಕೆ ಅನುದಾನ ಸ್ಥಗಿತಕ್ಕೆ ಇಸ್ರೇಲ್ ನಿರ್ಧಾರ

ಫೆಲೆಸ್ತೀನಿಯನ್ ಬಾಲಕನ ಕುರಿತ ಚಿತ್ರಕ್ಕೆ ಅತ್ಯುತ್ತಮ ಸಿನೆಮಾ ಪ್ರಶಸ್ತಿ ಘೋಷಿಸಿರುವುದಕ್ಕೆ ಅಸಮಾಧಾನ

Update: 2025-09-18 21:30 IST

ಜೆರುಸಲೇಂ: ಫೆಲೆಸ್ತೀನಿಯನ್ ಬಾಲಕನ ಕುರಿತ ಚಿತ್ರಕ್ಕೆ ಅತ್ಯುತ್ತಮ ಸಿನೆಮಾ ಪ್ರಶಸ್ತಿ ಘೋಷಿಸಿರುವುದಕ್ಕೆ ಅಸಮಾಧಾನ ಸೂಚಿಸಿರುವ ಇಸ್ರೇಲ್‍ನ ಸಂಸ್ಕೃತಿ ಸಚಿವ ಮಿಕಿ ಝೊಹಾರ್, ದೇಶದ ರಾಷ್ಟ್ರೀಯ ಸಿನೆಮಾ ಪುರಸ್ಕಾರಕ್ಕೆ 2026ರಿಂದ ಹಣಕಾಸು ಬೆಂಬಲ ಹಿಂಪಡೆಯಲು ನಿರ್ಧರಿಸಲಾಗಿದೆ ಎಂದಿದ್ದಾರೆ.

ಟೆಲ್ ಅವೀವ್‍ನಲ್ಲಿ ಬುಧವಾರ ನಡೆದ ಒಫಿರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ 12 ವರ್ಷದ ಫೆಲೆಸ್ತೀನಿಯನ್ ಬಾಲಕನ ಕುರಿತ ಚಿತ್ರ `ದಿ ಸೀ' ಅತ್ಯುತ್ತಮ ಸಿನೆಮಾ ಪ್ರಶಸ್ತಿ ಪಡೆದಿತ್ತು. ` ವಾರ್ಷಿಕ ಒಫಿರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಇಸ್ರೇಲಿ ನಾಗರಿಕರಿಗೆ ಕಪಾಳ ಮೋಕ್ಷವಾಗಿದೆ. ನಮ್ಮ ವೀರ ಸೈನಿಕರ ಮುಖದ ಮೇಲೆ ಉಗುಳುವ ಸಮಾರಂಭಕ್ಕಾಗಿ ಇಸ್ರೇಲಿ ಪ್ರಜೆಗಳು ತಮ್ಮ ಜೇಬಿನಿಂದ ಹಣ ನೀಡಬೇಕಿಲ್ಲ. 2026ರ ಬಜೆಟ್‍ನಿಂದ ಆರಂಭಿಸಿ ಈ ಅಸಹ್ಯ ಕಾರ್ಯಕ್ರಮಕ್ಕೆ ತೆರಿಗೆ ಪಾವತಿಸುವವರ ಹಣವನ್ನು ನೀಡಲಾಗದು' ಎಂದು ಝೊಹಾರ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇಸ್ರೇಲಿ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಶೈ ಕಾರ್ಮೆಲ್ಲಿ-ಪೊಲ್ಲಾಕ್ ನಿರ್ದೇಶನದ `ದಿ ಸೀ' ಸಿನೆಮಾದಲ್ಲಿ ಟೆಲ್ ಅವೀವ್‍ಗೆ ಫೆಲೆಸ್ತೀನಿಯನ್ ಬಾಲಕನ ಶಾಲಾ ಪ್ರವಾಸವನ್ನು ಗಡಿಭಾಗದಲ್ಲಿ ತಡೆದ ಬಳಿಕ ಬಾಲಕ ಇಸ್ರೇಲ್ ಗಡಿಯೊಳಗೆ ನುಸುಳಿ ಅಪಾಯಕಾರಿ ಪ್ರಯಾಣ ಕೈಗೊಳ್ಳುವ ಕಥೆಯಿದೆ. ಖಾಲಿದ್ ಪಾತ್ರ ನಿರ್ವಹಿಸಿರುವ ಮುಹಮ್ಮದ್ ಗಝಾವಿ `ಓಫಿರ್ ಅತ್ಯುತ್ತಮ ನಟ' ಪ್ರಶಸ್ತಿ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News