“ ಏಕಮುಖ ಬಾಹ್ಯಾಕಾಶ ಯಾತ್ರೆಗೆ ಮಸ್ಕ್ ಆತಿಥೇಯ, ಟ್ರಂಪ್ ಅತಿಥಿ!”
ಜಾಗತಿಕ ನಾಯಕರನ್ನು ಆಲ್ಫಾ ಚಿಂಪಾಂಜಿಗಳಿಗೆ ಹೋಲಿಸಿದ ಜೇನ್ ಗುಡಾಲ್ ರ ವ್ಯಂಗ್ಯಭರಿತ ಕೊನೆಯ ಮಾತುಗಳು
ಜೇನ್ ಗುಡಾಲ್ | Photo Credit : PTI
ಲಂಡನ್: ಖ್ಯಾತ ಪ್ರೈಮೆಟಾಲಜಿಸ್ಟ್ (ಮಾನವನನ್ನು ಹೊರತು ಪಡಿಸಿ ಇತರ ಸಸ್ತನಿಗಳ ಅಧ್ಯಯನಕಾರರು) ಜೇನ್ ಗುಡಾಲ್ ಅವರು ಕೊನೆಯದಾಗಿ ರೆಕಾರ್ಡ್ ಮಾಡಿದ್ದ ತನ್ನ ಸಂದರ್ಶನವೊಂದರಲ್ಲಿ ಹಲವಾರು ಜಾಗತಿಕ ನಾಯಕರು ಮತ್ತು ಬಿಲಿಯಾಧೀಶರ ಆಕ್ರಮಣಕಾರಿ ಸ್ವಭಾವವನ್ನು ಆಲ್ಫಾ(ಗುಂಪಿನಲ್ಲಿ ಬಲಿಷ್ಠ) ಗಂಡು ಚಿಂಪಾಂಜಿಗಳಿಗೆ ಹೋಲಿಸಿದ್ದು, ಅವರನ್ನು ಬಾಹ್ಯಾಕಾಶಕ್ಕೆ ಏಕಮುಖ ಪ್ರವಾಸಕ್ಕೆ ಕಳುಹಿಸಬೇಕೆಂದು ತಮಾಷೆಯಾಗಿ ಸೂಚಿಸಿದ್ದಾರೆ.
ಕಳೆದ ವಾರ ತನ್ನ 91ನೇ ವಯಸ್ಸಿನಲ್ಲಿ ನಿಧನರಾದ ಬಳಿಕ ಬಿಡುಗಡೆಯಾದ ಹೊಸ ನೆಟ್‌ಫ್ಲಿಕ್ಸ್ ಡಾಕ್ಯುಮೆಂಟರಿ ‘ಫೇಮಸ್ ಲಾಸ್ಟ್ ವರ್ಡ್ಸ್’ನಲ್ಲಿ ಅವರ ಈ ಹಾಸ್ಯಭರಿತ ಹೇಳಿಕೆಗಳು ಕಾಣಿಸಿಕೊಂಡಿವೆ.
ಸಂದರ್ಶಕ ಬ್ರಾಡ್ ಫಾಲ್ಚುಕ್ ಜೊತೆ ಮಾತನಾಡಿರುವ ಗುಡಾಲ್ ಅವರು ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್,ವ್ಲಾದಿಮಿರ್ ಪುಟಿನ್,ಕ್ಸಿ ಜಿನ್‌ಪಿಂಗ್ ಮತ್ತು ಬೆಂಜಾಮಿನ್ ನೆತಾನ್ಯಹು ಅವರನ್ನು ಮಸ್ಕ್ ಅವರ ಬಾಹ್ಯಾಕಾಶ ನೌಕೆಯೊಂದರಲ್ಲಿ ದೂರದ ಗ್ರಹವೊಂದಕ್ಕೆ ಉಡಾವಣೆ ಮಾಡುವುದಾಗಿ ಹೇಳಿದ್ದಾರೆ.
‘ನನಗೆ ಇಷ್ಟವಿಲ್ಲದ ಜನರಿದ್ದಾರೆ ಮತ್ತು ಅವರೆಲ್ಲರನ್ನು ಮಸ್ಕ್ ಅವರ ಬಾಹ್ಯಾಕಾಶ ನೌಕೆಯೊಂದಕ್ಕೆ ಹತ್ತಿಸುತ್ತೇನೆ ಮತ್ತು ತಾನು ಕಂಡು ಹಿಡಿಯುತ್ತೇನೆ ಎಂದು ಮಸ್ಕ್ ನಂಬಿರುವ ಗ್ರಹಕ್ಕೆ ರವಾನಿಸುತ್ತೇನೆ’ ಎಂದು ಗುಡಾಲ್ ಹೇಳಿದ್ದಾರೆ. ಮಸ್ಕ್ ಕೂಡ ಅದರಲ್ಲಿರುತ್ತಾರೆಯೇ ಎಂಬ ಪ್ರಶ್ನೆಗೆ ಅವರು, ‘ಖಂಡಿತವಾಗಿ,ಅವರೇ ಆತಿಥೇಯರಾಗಿರುತ್ತಾರೆ ’ ಎಂದು ವ್ಯಂಗ್ಯವಾಡಿದ್ದಾರೆ.
ಚಿಂಪಾಂಜಿಗಳ ನಡವಳಿಕೆ ಕುರಿತು ತನ್ನ ಪ್ರವರ್ತಕ ಸಂಶೋಧನೆ ಮತ್ತು ಜೀವಮಾನದುದ್ದಕ್ಕೂ ಪರಿಸರ ಪ್ರತಿಪಾದನೆಗಾಗಿ ಹೆಸರಾಗಿರುವ ಗುಡಾಲ್ ಆಕ್ರಮಣಕಾರಿ ನಾಯಕರು ಮತ್ತು ಆಲ್ಫಾ ಚಿಂಪಾಂಜಿಗಳ ನಡುವೆ ಹೋಲಿಕೆಗಳನ್ನು ಎತ್ತಿ ತೋರಿಸಿದ್ದಾರೆ. ‘ಎರಡು ವಿಧಗಳ ಆಲ್ಫಾಗಳನ್ನು ನಾವು ಹೊಂದಿದ್ದೇವೆ. ಒಂದು ಆಕ್ರಮಣಶೀಲವಾಗಿ ಆಳುತ್ತದೆ ಮತ್ತು ಹೆಚ್ಚು ಕಾಲ ಉಳಿಯುವುದಿಲ್ಲ. ಇನ್ನೊಂದು ಬುದ್ಧಿವಂತಿಕೆಯನ್ನು ಮತ್ತು ಮೈತ್ರಿಗಳನ್ನು ಬಳಸುತ್ತದೆ,ಅದು ಹೆಚ್ಚು ಕಾಲ ಉಳಿಯುತ್ತದೆ’ ಎಂದು ಅವರು ವಿವರಿಸಿದ್ದಾರೆ.
ತನ್ನ ಹಿಂದಿನ ಸಂದರ್ಶನಗಳಲ್ಲಿ ಟ್ರಂಪ್‌ರನ್ನು ಪ್ರಬಲ ಚಿಂಪಾಂಜಿಗಳಿಗೆ ಹೋಲಿಸಿದ್ದ ಗುಡಾಲ್, ಅವುಗಳ ಸೊಕ್ಕಿನ ಮತ್ತು ಎದುರಾಳಿಗಳನ್ನು ಬೆದರಿಸುವ ಪ್ರವೃತ್ತಿಯನ್ನು ಬೆಟ್ಟು ಮಾಡಿದ್ದರು.
ಡಾಕ್ಯುಮೆಂಟರಿಯು ಮಾನವರು ಮತ್ತು ಚಿಂಪಾಂಜಿಗಳಲ್ಲಿ ಗುಂಪು ಆಕ್ರಮಣಶೀಲತೆ ಕುರಿತು ಅವರ ಅವಲೋಕನಗಳನ್ನೂ ಒಳಗೊಂಡಿದೆ. ‘ಅದು ಸಾಂಕ್ರಾಮಿಕ. ಒಬ್ಬರು ಆಕ್ರಮಣಕಾರಿಯಾಗಿ ವರ್ತಿಸಿದರೆ ಇತರರೂ ಅದನ್ನು ಅನುಸರಿಸುತ್ತಾರೆ. ಅವರು ತಮ್ಮ ಪ್ರದೇಶವನ್ನು ರಕ್ಷಿಸಿಕೊಳ್ಳಲು ಅಥವಾ ಪ್ರಾಬಲ್ಯಕ್ಕಾಗಿ ಕಾದಾಡುತ್ತಾರೆ’ ಎಂದು ಗುಡಾಲ್ ಹೇಳಿದ್ದಾರೆ.
ಕೆಲವು ಜಾಗತಿಕ ನಾಯಕರ ಕುರಿತು ತನ್ನ ಟೀಕೆಗಳ ಹೊರತಾಗಿಯೂ ಗುಡಾಲ್ ಭರವಸೆಯೊಂದಿಗೆ ತನ್ನ ಸಂದರ್ಶನವನ್ನು ಮುಗಿಸಿದ್ದಾರೆ. ಇಂದಿಗೂ ಗ್ರಹದಲ್ಲಿ ಅಂಧಕಾರ ತುಂಬಿರುವಾಗ ಭರವಸೆ ಈಗಲೂ ಉಳಿದುಕೊಂಡಿದೆ. ಭರವಸೆಯನ್ನುಕಳೆದುಕೊಳ್ಳಬೇಡಿ. ನೀವು ಭರವಸೆಯನ್ನು ಕಳೆದುಕೊಂಡರೆ ನೀವು ನಿರಾಸಕ್ತರಾಗುತ್ತೀರಿ ಮತ್ತು ಏನನ್ನೂ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ.