×
Ad

ಟರ್ಕಿ ಜತೆ ಕದನವಿರಾಮ ಘೋಷಿಸಿದ ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿ

Update: 2025-03-01 22:28 IST

PC | wikipedia

ಇಸ್ತಾಂಬುಲ್: ಟರ್ಕಿಯ ನಿಷೇಧಿತ ಕುರ್ಡಿಶ್ ಗುಂಪು `ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿ(ಪಿಕೆಕೆ) 40 ವರ್ಷಗಳ ಬಳಿಕ ಟರ್ಕಿ ಜತೆ ಕದನ ವಿರಾಮ ಘೋಷಿಸಿದ್ದಾರೆ.

ಗುಂಪನ್ನು ವಿಸರ್ಜಿಸುವಂತೆ ಮತ್ತು ಶಸ್ತ್ರಾಸ್ತ್ರ ಕೆಳಗಿಡುವಂತೆ ಜೈಲಿನಲ್ಲಿರುವ ಪಿಕೆಕೆ ನಾಯಕ ಅಬ್ದುಲ್ಲಾ ಒಕಲಾನ್ ಕರೆ ನೀಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪಿಕೆಕೆ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ನಮ್ಮ ನಾಯಕ ಅಬ್ದುಲ್ಲಾ ಅವರು ಶಾಂತಿ ಮತ್ತು ಪ್ರಜಾಪ್ರಭುತ್ವ ಸಮಾಜಕ್ಕಾಗಿ ನೀಡಿದ ಕರೆಯ ಅನುಷ್ಠಾನಕ್ಕೆ ದಾರಿ ಮಾಡಿಕೊಡುವ ನಿಟ್ಟಿನಲ್ಲಿ ನಾವು ತಕ್ಷಣವೇ ಜಾರಿಗೆ ಬರುವಂತೆ ಕದನ ವಿರಾಮವನ್ನು ಘೋಷಿಸಿದ್ದೇವೆ. ಕರೆಯ ವಿಷಯವನ್ನು ನಾವು ಒಪ್ಪುತ್ತೇವೆ, ಅದನ್ನು ಅನುಸರಿಸುತ್ತೇವೆ ಮತ್ತು ಕಾರ್ಯಗತಗೊಳಿಸುತ್ತೇವೆ ಎಂದು ಪಿಕೆಕೆಯ ಕಾರ್ಯಕಾರಿ ಸಮಿತಿಯನ್ನು ಉಲ್ಲೇಖಿಸಿ ಎಎನ್‍ಎಫ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಟರ್ಕಿಯ 85 ದಶಲಕ್ಷ ಜನರಲ್ಲಿ ಸುಮಾರು 20%ದಷ್ಟಿರುವ ಕುಡ್ರ್ಸ್ ಜನರಿಗಾಗಿ ತಾಯ್ನಾಡನ್ನು ರಚಿಸುವ ಉದ್ದೇಶದಿಂದ 1984ರಿಂದ ಬಂಡಾಯ ನಡೆಸುತ್ತಿರುವ ಪಿಕೆಕೆಯನ್ನು ಭಯೋತ್ಪಾದಕ ಗುಂಪು ಎಂದು ಟರ್ಕಿ, ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್ ಗೊತ್ತುಪಡಿಸಿದೆ. 1999ರಲ್ಲಿ ಅಬ್ದುಲ್ಲಾ ಒಕಲಾನ್ ಜೈಲುಪಾಲಾದ ಬಳಿಕ ರಕ್ತಪಾತವನ್ನು ಅಂತ್ಯಗೊಳಿಸಲು ಹಲವಾರು ಪ್ರಯತ್ನಗಳನ್ನು ನಡೆಸಲಾಗಿದೆ. ಸುಮಾರು 40,000 ಜೀವಗಳನ್ನು ಬಲಿಪಡೆದಿರುವ ಸಂಘರ್ಷವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ 2015ರಲ್ಲಿ ನಡೆದ ಸಂಧಾನ ಮಾತುಕತೆ ವಿಫಲಗೊಂಡ ಬಳಿಕ ಯಾವುದೇ ಪ್ರಯತ್ನ ನಡೆದಿರಲಿಲ್ಲ. ಆದರೆ ಕಳೆದ ಅಕ್ಟೋಬರ್‍ನಲ್ಲಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೋಗನ್ ಅನಿರೀಕ್ಷಿತವಾಗಿ ಶಾಂತಿ ಪ್ರಸ್ತಾಪ ಮುಂದಿರಿಸಿದ್ದು ಇದಕ್ಕೆ ಪಿಕೆಕೆ ನಾಯಕ ಒಕಲಾನ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News