×
Ad

ನೈಜೀರಿಯಾದಲ್ಲಿ ಸಾಮೂಹಿಕ ಅಪಹರಣ | ‘ರಾಷ್ಟ್ರವ್ಯಾಪಿ ಭದ್ರತಾ ತುರ್ತುಸ್ಥಿತಿ’ ಘೋಷಿಸಿದ ಅಧ್ಯಕ್ಷ ಟಿನುಬು

Update: 2025-11-27 11:06 IST
Photo | AP

ಅಬುಜಾ: ನೈಜೀರಿಯಾದಲ್ಲಿ ಸಾಮೂಹಿಕ ಅಪಹರಣಗಳ ಪ್ರಕರಣಗಳು ಕಳೆದ ವಾರದಿಂದ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಬೋಲಾ ಟಿನುಬು ಬುಧವಾರ ರಾಷ್ಟ್ರವ್ಯಾಪಿ ಭದ್ರತಾ ತುರ್ತುಸ್ಥಿತಿ ಘೋಷಿಸಿದ್ದಾರೆ.

“ಇದು ರಾಷ್ಟ್ರದ ಗಂಭೀರ ಭದ್ರತಾ ತುರ್ತುಸ್ಥಿತಿ. ವಿಶೇಷವಾಗಿ ಭದ್ರತೆಗೆ ಹೆಚ್ಚು ಸವಾಲಾದ ಪ್ರದೇಶಗಳಲ್ಲಿ ಹೆಚ್ಚಿನ ಸಶಸ್ತ್ರ ಸಿಬ್ಬಂದಿಯನ್ನು ಕಾರ್ಯಾಚರಣೆಗೆ ಇಳಿಸುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುತ್ತಿದ್ದೇವೆ,” ಎಂದು ಟಿನುಬು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಒಂದು ವಾರದೊಳಗಾಗಿ, ಅಪರಿಚಿತ ದಾಳಿಕೋರರು 25 ಶಾಲಾ ಬಾಲಕಿಯರು, 38 ಆರಾಧಕರು, 315 ಶಾಲಾ ಮಕ್ಕಳು ಮತ್ತು ಶಿಕ್ಷಕರು, ಹೊಲದತ್ತ ನಡೆದುಕೊಂಡು ಹೋಗುತ್ತಿದ್ದ 13 ಯುವತಿಯರು ಹಾಗೂ ಇನ್ನೂ 10 ಮಹಿಳೆಯರು ಮತ್ತು ಮಕ್ಕಳನ್ನು ದೇಶದ ವಿವಿಧ ಭಾಗಗಳಲ್ಲಿ ಅಪಹರಿಸಿದ್ದಾರೆ.

ಬೇಸತ್ತು ಹೋಗಿರುವ ಭದ್ರತಾ ಪರಿಸ್ಥಿತಿಯ ನಡುವೆಯೂ, ಡಝನ್‌ ಗಟ್ಟಲೆ ಜನರನ್ನು ರಕ್ಷಿಸಲಾಗಿದ್ದು, ಕೆಲವರು ಸ್ವತಃ ತಪ್ಪಿಸಿಕೊಂಡಿದ್ದಾರೆ. ಆದರೆ ನೈಜರ್ ರಾಜ್ಯದ ಬೋರ್ಡಿಂಗ್ ಶಾಲೆಯೊಂದರಿಂದ 265ಕ್ಕೂ ಹೆಚ್ಚು ಮಕ್ಕಳು ಮತ್ತು ಶಿಕ್ಷಕರು ಶುಕ್ರವಾರ ಅಪಹರಣಕ್ಕೀಡಾದ ಘಟನೆ ದೇಶವನ್ನು ಬೆಚ್ಚಿಬೀಳಿಸಿದೆ.

ಪರಿಸ್ಥಿತಿ ಗಂಭೀರಗೊಂಡಿರುವುದರಿಂದ ಸಶಸ್ತ್ರ ಪಡೆಯಲ್ಲಿನ ಸಿಬ್ಬಂದಿ ಸಂಖ್ಯೆಯನ್ನು ತುರ್ತಾಗಿ ಹೆಚ್ಚಿಸಲು ಅಧ್ಯಕ್ಷರು ಆದೇಶಿಸಿದ್ದಾರೆ. ವಾರಾಂತ್ಯದಲ್ಲಿ ವಿಐಪಿ ಭದ್ರತಾ ಕರ್ತವ್ಯಗಳಲ್ಲಿ ತೊಡಗಿದ್ದ ಪೊಲೀಸ್ ಸಿಬ್ಬಂದಿಯನ್ನು ಸಾಮಾನ್ಯ ಪೊಲೀಸ್ ಕಾರ್ಯಗಳಿಗೆ ಮರು ನಿಯೋಜಿಸಿ, 30,000 ಹೊಸ ಪೊಲೀಸ್ ಅಧಿಕಾರಿಗಳ ನೇಮಕಾತಿಗೆ ಅವರು ಅನುಮೋದಿಸಿದ್ದರು. ಈಗ ಮತ್ತೊಂದು 20,000 ನೇಮಕಾತಿಗೆ ಸೂಚನೆ ನೀಡಿದ್ದು, ಒಟ್ಟಾರೆ 50,000 ಹೊಸ ಅಧಿಕಾರಿಗಳನ್ನು ಪಡೆಗೆ ಸೇರಿಸಿಕೊಳ್ಳಲಾಗುತ್ತದೆ.

ನೈಜೀರಿಯಾದಲ್ಲಿ ಶಾಲಾ ಮಕ್ಕಳು ದಾಳಿಕೋರರಿಗೆ ಗುರಿಯಾಗುವುದು ಹೊಸದೇನಲ್ಲ. 2014ರಲ್ಲಿ ಬೊಕೊ ಹರಾಮ್ ಉಗ್ರ ಸಂಘಟನೆ ಚಿಬೋಕ್‌ನಲ್ಲಿ 276 ವಿದ್ಯಾರ್ಥಿನಿಯರನ್ನು ಅಪಹರಿಸಿದ ಘಟನೆ ಬಳಿಕ ಇಂತಹ ದಾಳಿಗಳು ಹಲವು ಬಾರಿ ಪುನರಾವರ್ತನೆಯಾಗಿವೆ. ಇತ್ತೀಚಿನ ಅಪಹರಣಗಳ ಸರಣಿ ರಾಷ್ಟ್ರದ ಭದ್ರತಾ ವ್ಯವಸ್ಥೆಯ ಬಗ್ಗೆ ಪ್ರಶ್ನೆಯನ್ನು ಮೂಡಿಸಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News