×
Ad

ಖಲೀದಾ ಝಿಯಾ ಆರೋಗ್ಯ ಬಗ್ಗೆ ಮೋದಿ ಕಳವಳ; ನೆರವಿನ ಭರವಸೆ

Update: 2025-12-02 08:46 IST

PC: x.com/IndiaToday

ಹೊಸದಿಲ್ಲಿ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಝಿಯಾ ಅವರ ಆರೋಗ್ಯಸ್ಥಿತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. "ನಮ್ಮಿಂದ ಸಾಧ್ಯವಾಗುವ ಎಲ್ಲ ನೆರವನ್ನು ನೀಡಲು ಭಾರತ ಸಿದ್ಧವಿದೆ" ಎಂದು ಪ್ರಕಟಿಸಿದ್ದಾರೆ.

ಬಾಂಗ್ಲಾ ಮಾಜಿ ಪ್ರಧಾನಿ ತೀರಾ ಅನಾರೋಗ್ಯದಿಂದಿದ್ದು, ಕೃತಕ ಉಸಿರಾಟ ಸೌಲಭ್ಯದಡಿ ಇದ್ದಾರೆ ಎಂದು ಝಿಯಾ ಪಕ್ಷದ ಮುಖಂಡರು ಮಾಹಿತಿ ನೀಡಿದ ಕೆಲವೇ ಗಂಟೆಗಳಲ್ಲಿ ಮೋದಿ ಎಕ್ಸ್ ಪೋಸ್ಟ್ ನಲ್ಲಿ ನೆರವಿನ ಭರವಸೆ ನೀಡಿದ್ದಾರೆ.

"ಬಾಂಗ್ಲಾದೇಶದ ಸಾರ್ವಜನಿಕ ಜೀವನಕ್ಕೆ ಹಲವು ವರ್ಷಗಳ ಕಾಲ ಗಣನೀಯ ಕೊಡುಗೆ ನೀಡಿದ್ದ ಬೇಗಂ ಖಲೀದಾ ಝಿಯಾ ಅನಾರೋಗ್ಯದ ಬಗ್ಗೆ ತಿಳಿದು ತೀವ್ರ ದುಃಖವಾಯಿತು. ತ್ವರಿತವಾಗಿ ಅವರು ಚೇತರಿಸಿಕೊಳ್ಳುವಂತೆ ನಾವು ಪ್ರಾಮಾಣಿಕ ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ ಮತ್ತು ಗುಣಮುಖರಾಗುವಂತೆ ಆಶಿಸುತ್ತೇವೆ. ಎಲ್ಲ ಸಂಭಾವ್ಯ ನೆರವು ನೀಡಲು ಭಾರತ ಸಿದ್ಧವಿದೆ" ಎಂದು ಎಕ್ಸ್ ಪೋಸ್ಟ್ ನಲ್ಲಿ ಮೋದಿ ಹೇಳಿದ್ದಾರೆ.

ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ ಪಿ) ಅಧ್ಯಕ್ಷೆಯಾಗಿರುವ 80 ವರ್ಷ ವಯಸ್ಸಿನ ಖಲೀದಾ ಝಿಯಾ ಅವರನ್ನು ಎದೆ ಸೋಂಕು ಕಾರಣದಿಂದ ನ.23ರಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಹೃದಯ ಮತ್ತು ಶ್ವಾಸಕೋಶಕ್ಕೆ ಹಾನಿಯಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಆರೋಗ್ಯಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಮೂರು ಬಾರಿ ಬಾಂಗ್ಲಾದೇಶದ ಪ್ರಧಾನಿಯಾಗಿದ್ದ ಅವರನ್ನು ನಾಲ್ಕು ದಿನಗಳ ಬಳಿಕ ಕೊರೋನರಿ ಕೇರ್ ಯುನಿಟ್ ಗೆ ಸ್ಥಳಾಂತರಿಸಲಾಗಿತ್ತು.

ಇದೀಗ ಆರೋಗ್ಯಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಇರಿಸಲಾಗಿದೆ ಎಂದು ಬಿಎನ್ ಪಿ ಉಪಾಧ್ಯಕ್ಷ, ವಕೀಲ ಅಹ್ಮದ್ ಆಝಂ ಖಾನ್ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿ ಜಾಲತಾಣಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News