ಹೈಟಿಯಲ್ಲಿ ಹಿಂಸಾಚಾರ | ಅಮೆರಿಕದ ಮಿಷನರಿ ದಂಪತಿ ಸಹಿತ ಮೂವರ ಹತ್ಯೆ
ಪೋರ್ಟ್ ಆಫ್ ಪ್ರಿನ್ಸ್ : ಹೈಟಿಯಲ್ಲಿ ಮುಂದುವರಿದ ಗ್ಯಾಂಗ್‍ಗಳ ನಡುವಿನ ಸಂಘರ್ಷದಲ್ಲಿ ಅಮೆರಿಕದ ದಂಪತಿ ಸಹಿತ ಮೂವರು ಕ್ರಿಶ್ಚಿಯನ್ ಮಿಷನರಿಗಳು ಹತರಾಗಿರುವುದಾಗಿ ವರದಿಯಾಗಿದೆ.
ಮಿಷನರಿ(ಧರ್ಮ ಪ್ರಚಾರಕರು) ಮನೆಯೊಂದರಲ್ಲಿ ಆಶ್ರಯ ಪಡೆದಿದ್ದರು. ಆಗ ಕ್ರಿಮಿನಲ್‍ಗಳ ತಂಡವು ಮನೆಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೃತರಲ್ಲಿ ಅಮೆರಿಕದ ಸಂಸದ ಬೆನ್ ಬೆಕರ್ ಅವರ ಪುತ್ರಿ ನತಾಲೀ ಲಾಯ್ಡ್ ಹಾಗೂ ಅಳಿಯ ಡೇವಿಡ್ ಲಾಯ್ಡ್ ಸೇರಿದ್ದಾರೆ. ಇವರಿಬ್ಬರು ಹೈಟಿಯಲ್ಲಿ ಕ್ರಿಶ್ಚಿಯನ್ ಮಿಷನರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಮಿತಿಯ ವಕ್ತಾರರು ಹೇಳಿದ್ದಾರೆ. ಸಾವನ್ನಪ್ಪಿದ ಮೂರನೇ ವ್ಯಕ್ತಿಯ ಕುರಿತ ಮಾಹಿತಿಯನ್ನು ಅಧಿಕಾರಿಗಳು ನೀಡಿಲ್ಲ.
ಈ ಮಧ್ಯೆ, ನತಾಲೀ ಹಾಗೂ ಆಕೆಯ ಪತಿ ಆಶ್ರಯ ಪಡೆದಿದ್ದ ಮನೆಯ ಮೇಲೆ ಕ್ರಿಮಿನಲ್ ಗ್ಯಾಂಗ್ ದಾಳಿ ನಡೆಸಿರುವ ಮಾಹಿತಿ ತಿಳಿದೊಡನೆ ತನ್ನ ಕಚೇರಿಯು ಹೈಟಿಯಲ್ಲಿರುವ ಅಮೆರಿಕನ್ ರಾಯಭಾರಿ ಕಚೇರಿಗೆ ಕರೆ ಮಾಡಿ ವಿಷಯ ತಿಳಿಸಿತ್ತು. ಆದರೆ ʼಅಲ್ಲಿಗೆ ಪೊಲೀಸರನ್ನು ಕಳಿಸುವುದು ಅತ್ಯಂತ ಅಪಾಯಕಾರಿ' ಎಂದು ರಾಯಭಾರಿ ಕಚೇರಿ ಕೋರಿಕೆಯನ್ನು ನಿರಾಕರಿಸಿದೆ. ಹಿಂಸಾಚಾರದಿಂದ ನಮ್ಮ ಪ್ರಜೆಗಳನ್ನು ರಕ್ಷಿಸಲೂ ಆಗದಷ್ಟು ದುರ್ಬಲ ದೇಶ ನಮ್ಮದಾಗಿದೆ ಎಂದು ರಿಪಬ್ಲಿಕನ್ ಸಂಸದ ಜೋಷ್ ಹ್ಯಾವ್ಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೈಟಿಯಲ್ಲಿ ಕ್ರಿಮಿನಲ್ ಗ್ಯಾಂಗ್‍ಗಳ ಹಿಂಸಾಚಾರವನ್ನು ನಿಯಂತ್ರಿಸಲು ಸರಕಾರದ ಪಡೆ ವಿಫಲವಾಗಿದ್ದು ಹೈಟಿ ವಿಫಲ ರಾಷ್ಟ್ರವಾಗುವ ಅಪಾಯದ ಸನಿಹದಲ್ಲಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಎಚ್ಚರಿಕೆ ನೀಡಿದ್ದಾರೆ.