×
Ad

ಇಸ್ರೇಲ್ ದಾಳಿಯಲ್ಲಿ ಇರಾನ್ ನ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಖಾನೆ ನಾಶ : ವರದಿ

Update: 2024-10-27 21:44 IST

PC : PTI

ಟೆಹ್ರಾನ್ : ಇರಾನ್‍ ನ ಮಿಲಿಟರಿ ನೆಲೆಗಳ ಮೇಲೆ ಶನಿವಾರ ಇಸ್ರೇಲ್ ನಡೆಸಿದ್ದ ದಾಳಿಯಲ್ಲಿ, ಇರಾನ್‍ ನ ರಹಸ್ಯ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಖಾನೆ ಹಾಗೂ ಅಪ್ರಚಲಿತ(ಬಳಕೆಯಲ್ಲಿಲ್ಲದ) ಪರಮಾಣು ಶಸ್ತ್ರಾಸ್ತ್ರ ಅಭಿವೃದ್ದಿ ಯೋಜನೆಯ ಭಾಗವಾಗಿರುವ ಕಟ್ಟಡ ನಾಶವಾಗಿದೆ. ಇದು ಕ್ಷಿಪಣಿ ಉದ್ಯಮದ ಬೆನ್ನೆಲುಬಾಗಿತ್ತು ಎಂದು ವರದಿಯಾಗಿದೆ.

ಈ ದಾಳಿಯು ಇರಾನ್‍ ನ ಪ್ರತೀಕಾರದ ಸಾಮರ್ಥ್ಯ ಮತ್ತು ಅದರ ದಾಸ್ತಾನುಗಳನ್ನು ಮರುಪೂರಣಗೊಳಿಸುವ ಸಾಮರ್ಥ್ಯವನ್ನು ತೀವ್ರವಾಗಿ ಅಡ್ಡಿಗೊಳಿಸಿರಬಹುದು ಎಂದು ತಜ್ಞರು ಹೇಳಿದ್ದಾರೆ.

ಈ ದಾಳಿಗಳು ಅತ್ಯಂತ ನಿಖರವಾಗಿದ್ದವು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಖಾನೆಯನ್ನು ನಿಷ್ಕ್ರಿಗೊಳಿಸಿದೆ. ಜತೆಗೆ, ಇಸ್ರೇಲ್ ವಿರುದ್ಧ ಇರಾನ್ ನಡೆಸಿದ್ದ ದಾಳಿಗೆ ಬಳಸಿದ್ದ ಕ್ಷಿಪಣಿಗಳಿಗೆ ಶಕ್ತಿ ನೀಡಲು ಬಳಸಲಾದ ಮೂಲಸೌಕರ್ಯವನ್ನೂ ನಾಶಗೊಳಿಸಿದೆ. ರಶ್ಯ ನಿರ್ಮಿತ ಎಸ್-300 ವಾಯುರಕ್ಷಣಾ ವ್ಯವಸ್ಥೆಗಳು ಹಾಗೂ ರೇಡಾರ್ ವ್ಯವಸ್ಥೆಗಳಿಗೂ ಹಾನಿಯಾಗಿದೆ. ಡ್ರೋನ್ ಉತ್ಪಾದನಾ ಫ್ಯಾಕ್ಟರಿ, ಪರಮಾಣು ಶಸ್ತ್ರಾಸ್ತ್ರಗಳ ಸಂಶೋಧನೆ ಮತ್ತು ಅಭಿವೃದ್ಧಿ ನಡೆಸುವ ಪಾರ್ಚಿನ್ ಮಿಲಿಟರಿ ಸಂಕೀರ್ಣದ ಒಂದು ವ್ಯವಸ್ಥೆಯನ್ನೂ ಗುರಿಯಾಗಿಸಿ ದಾಳಿ ನಡೆಸಿರುವುದನ್ನು ವಾಣಿಜ್ಯ ಉಪಗ್ರಹಗಳಿಂದ ಲಭಿಸಿದ ಫೋಟೋಗಳು ದೃಢಪಡಿಸಿವೆ.

ಇಸ್ರೇಲ್ ದಾಳಿಗಳು ಸಾಮೂಹಿಕ ಕ್ಷಿಪಣಿಗಳನ್ನು ಉತ್ಪಾದಿಸುವ ಇರಾನ್‍ ನ ಸಾಮರ್ಥ್ಯವನ್ನು ಗಮನಾರ್ಹವಾಗಿ ಅಡ್ಡಿಪಡಿಸಿರಬಹುದು ಎಂದು ವಿಶ್ವಸಂಸ್ಥೆಯ ಮಾಜಿ ಆಯುಧ ಪರೀಕ್ಷಕ ಡೇವಿಡ್ ಅಲ್‍ಬ್ರೈಟ್ ಹಾಗೂ ಸಿಎನ್‍ಎಯ ಸಹಾಯಕ ಸಂಶೋಧನಾ ವಿಶ್ಲೇಷಕ ಡೆಕರ್ ಎವೆಲೆತ್ ಹೇಳಿದ್ದಾರೆ.

ಇರಾನ್ ಮಧ್ಯಪ್ರಾಚ್ಯದ ಅತೀ ದೊಡ್ಡ ಕ್ಷಿಪಣಿ ಶಸ್ತ್ರಾಗಾರವನ್ನು ಹೊಂದಿದೆ. ರಶ್ಯ, ಯೆಮನ್‍ನ ಹೌದಿಗಳು, ಲೆಬನಾನ್‍ ನ ಹಿಜ್ಬುಲ್ಲಾಗಳಿಗೆ ಕ್ಷಿಪಣಿ ಪೂರೈಸುತ್ತಿರುವುದಾಗಿ ಅಮೆರಿಕ ಆರೋಪಿಸುತ್ತಿದೆ. ಆದರೆ ಇರಾನ್‍ನಿಂದ ಕ್ಷಿಪಣಿ ಪಡೆದಿರುವುದನ್ನು ರಶ್ಯ ನಿರಾಕರಿಸಿದೆ.

► ನಾಲ್ಕು ಸೈನಿಕರ ಮೃತ್ಯು: ಇರಾನ್

ಶನಿವಾರ ಬೆಳಿಗ್ಗೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ನಾಲ್ಕು ಯೋಧರು ಸಾವನ್ನಪ್ಪಿರುವುದಾಗಿ ಇರಾನ್ ಸೇನೆ ಹೇಳಿದೆ. ಇರಾನ್ ತನ್ನನ್ನು ತಾನು ರಕ್ಷಿಸಿಕೊಳ್ಳುವ ಜವಾಬ್ದಾರಿ ಹೊಂದಿದೆ. ಆದರೆ ಪ್ರಾದೇಶಿಕ ಶಾಂತಿ ಮತ್ತು ಭದ್ರತೆಯ ಕಡೆಗಿನ ತನ್ನ ಹೊಣೆಗಾರಿಕೆಯನ್ನೂ ಇರಾನ್ ಅರಿತುಕೊಂಡಿದೆ ಎಂದು ಇರಾನ್‍ನ ವಿದೇಶಾಂಗ ಇಲಾಖೆ ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News