ಪಾಕ್: ಹೊಸ ವೀಸಾ ನೀತಿ ಅನಾವರಣ ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುವ ಗುರಿ
ಸಂಧಾರ್ಬಿಕಾ ಚಿತ್ರ | Photo: PTI
ಇಸ್ಲಮಾಬಾದ್: ಪಾಕಿಸ್ತಾನವು ತನ್ನ ದುರ್ಬಲ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ, ವಿಶ್ವದಾದ್ಯಂತದ ಹೂಡಿಕೆದಾರರನ್ನು ಆಕರ್ಷಿಸುವ ಗುರಿ ಹೊಂದಿರುವ ಹೊಸ ವೀಸಾ ನೀತಿಯನ್ನು ಪರಿಚಯಿಸಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ದೇಶದ ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಹುಡುಕುವ ಉದ್ದೇಶದಿಂದ ಈ ಹಿಂದಿನ ಶಹಬಾಝ್ ಶರೀಫ್ ಸರಕಾರ ರಚಿಸಿದ್ದ ನಾಗರಿಕ-ಮಿಲಿಟರಿ ಸಹಭಾಗಿತ್ವದ `ಸ್ಪೆಷಲ್ ಇನ್ವೆಸ್ಟ್ಮೆಂಟ್ ಫೆಸಿಲಿಟೇಷನ್ ಕೌನ್ಸಿಲ್'(ಎಸ್ಐಎಫ್ಸಿ)ಯ ನೇತೃತ್ವದಡಿ ನಡೆದ 2 ದಿನಗಳ ಸಮಾಲೋಚನಾ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಸಭೆಯ ಅಧ್ಯಕ್ಷತೆ ವಹಿಸಿದ್ದ ಉಸ್ತುವಾರಿ ಪ್ರಧಾನಿ ಅನ್ವರ್ ಉಲ್ ಹಕ್ ಕಾಕರ್ `ಪಾಕಿಸ್ತಾನಕ್ಕೆ ಭೇಟಿ ನೀಡಬಯಸುವ ವಿದೇಶಿ ಉದ್ಯಮಿಗಳಿಗೆ ಹೊಸ, ಸುಲಭ ವೀಸಾ ವ್ಯವಸ್ಥೆಯನ್ನು ಸಭೆ ಅನುಮೋದಿಸಿದೆ. ಇವರು ತಮ್ಮ ದೇಶ ಅಥವಾ ಅಂತರಾಷ್ಟ್ರೀಯ ವ್ಯಾಪಾರ ಸಂಸ್ಥೆಗಳಿಂದ ಒಂದೇ ದಾಖಲೆಯನ್ನು ಸಲ್ಲಿಸಿದರೆ ಸುಲಭದಲ್ಲಿ ವೀಸಾ ದೊರೆಯಲಿದೆ. ಅಲ್ಲದೆ ಪಾಕಿಸ್ತಾನದ ಚೇಂಬರ್ ಆಫ್ ಕಾಮರ್ಸ್ ವಿದೇಶಿ ಉದ್ಯಮಿಗಳಿಗೆ ನೀಡುವ ದಾಖಲೆಯ ಆಧಾರದಲ್ಲೂ ವೀಸಾ ಮಂಜೂರಾಗಲಿದೆ ' ಎಂದು ಪ್ರಕಟಿಸಿದ್ದಾರೆ.
ಎಸ್ಐಎಫ್ ಸಿಯಲ್ಲಿ ಹೂಡಿಕೆ ಮಾಡಲು ಗಲ್ಫ್ ಸಹಕಾರ ಮಂಡಳಿ(ಜಿಸಿಸಿ) ಆಸಕ್ತಿ ತೋರಿದೆ. ಚೀನಾ, ಅಮೆರಿಕ ಮತ್ತು ಮಧ್ಯಪ್ರಾಚ್ಯ ದೇಶಗಳಿಂದಲೂ ಉತ್ತಮ ಸ್ಪಂದನೆ ದೊರಕುವ ನಿರೀಕ್ಷೆಯಿದೆ ಎಂದು ಉಸ್ತುವಾರಿ ಪ್ರಧಾನಿ ಜಲೀಲ್ ಅಬ್ಬಾಸ್ ಜೀಲಾನಿ ಸುದ್ಧಿಗೋಷ್ಠಿಯಲ್ಲಿ ಹೇಳಿದ್ದಾರೆ.