ಜಾಗತಿಕ ಭಯೋತ್ಪಾದನೆ ಸೂಚ್ಯಂಕ: ಪಾಕಿಸ್ತಾನಕ್ಕೆ 2ನೇ ಸ್ಥಾನ
ಸಾಂದರ್ಭಿಕ ಚಿತ್ರ
ಇಸ್ಲಾಮಾಬಾದ್: ಭಯೋತ್ಪಾದಕ ದಾಳಿ ಪ್ರಕರಣ ಮತ್ತು ನಾಗರಿಕ ಸಾವುನೋವುಗಳ ಪ್ರಮಾಣದಲ್ಲಿ ತೀವ್ರ ಹೆಚ್ಚಳವಾಗಿರುವುದು ಜಾಗತಿಕ ಭಯೋತ್ಪಾದನೆ ಸೂಚ್ಯಂಕ-2025ರಲ್ಲಿ ಪಾಕಿಸ್ತಾನವನ್ನು ಎರಡನೇ ಸ್ಥಾನಕ್ಕೆ ತಂದಿರಿಸಿದೆ. ಬುರ್ಕಿನಾ ಫಾಸೋ ಅಗ್ರ ಸ್ಥಾನದಲ್ಲಿದೆ.
ಇನ್‍ಸ್ಟಿಟ್ಯೂಟ್ ಆಫ್ ಇಕನಾಮಿಕ್ಸ್ ಆ್ಯಂಡ್ ಪೀಸ್(ಐಇಪಿ) ಪ್ರಕಟಿಸಿರುವ ವರದಿಯಲ್ಲಿ ವಿಶ್ವದಾದ್ಯಂತದ 163 ದೇಶಗಳ ಅಂಕಿಅಂಶಗಳನ್ನು ಪರಿಶೀಲಿಸಲಾಗಿದೆ. ಭಯೋತ್ಪಾದಕ ಘಟನೆಗಳ ಸಂಖ್ಯೆ, ಸಾವು-ನೋವುಗಳು, ಅಪಹರಣ ಮುಂತಾದ ಅಂಶಗಳನ್ನು ಪರಿಗಣಿಸಿ ಸಿದ್ಧಪಡಿಸಿರುವ ವರದಿ ಪ್ರಕಾರ ಪಾಕಿಸ್ತಾನದಲ್ಲಿ ಭಯೋತ್ಪಾದನೆ ಸಂಬಂಧಿಸಿದ ಸಾವುಗಳ ಸಂಖ್ಯೆ ಕಳೆದ ಐದು ವರ್ಷಗಳಿಂದ ನಿರಂತರ ಏರಿಕೆಯಾಗುತ್ತಿದೆ. 2024ರಲ್ಲಿ ದೇಶದಾದ್ಯಂತ ಭಯೋತ್ಪಾದಕ ದಾಳಿಗಳಲ್ಲಿ 45% ಏರಿಕೆಯಾಗಿದೆ. ನಿಷೇಧಿತ ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ್ ಅತ್ಯಂತ ಕ್ಷಿಪ್ರವಾಗಿ ಬೆಳೆಯುತ್ತಿರುವ ಭಯೋತ್ಪಾದಕ ಗುಂಪಾಗಿ ಗುರುತಿಸಿಕೊಂಡಿದ್ದು 2024ರಲ್ಲಿ ಪಾಕಿಸ್ತಾನದಲ್ಲಿ 482 ದಾಳಿಗಳನ್ನು ನಡೆಸಿರುವುದಾಗಿ ವರದಿ ಹೇಳಿದೆ.
ಸೂಚ್ಯಂಕದ ಪ್ರಕಾರ ಬುರ್ಕಿನಾ ಫಾಸೊ, ಪಾಕಿಸ್ತಾನ, ಸಿರಿಯಾ, ಮಾಲಿ, ನೈಜರ್, ನೈಜೀರಿಯಾ, ಸೊಮಾಲಿಯಾ, ಇಸ್ರೇಲ್, ಅಫ್ಘಾನಿಸ್ತಾನ, ಕ್ಯಾಮರೂನ್ ಅಗ್ರ 10 ರಾಷ್ಟ್ರಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.