ಫೆಲೆಸ್ತೀನ್‌ಗೆ ಒಂದು ದೇಶವಾಗಿ ಮಾನ್ಯತೆ ನೀಡಲು ಕೆನಡಾ ಸಜ್ಜು
ಪ್ರಧಾನಿ ಮಾರ್ಕ್ ಕಾರ್ನಿ | PC : X \ @PopBase
ಒಟ್ಟಾವಾ: ಕೆನಡಾ ಫೆಲೆಸ್ತೀನ್ ಅನ್ನು ಒಂದು ದೇಶವಾಗಿ ಮಾನ್ಯತೆ ನೀಡಲು ಉದ್ದೇಶಿಸಿದೆ ಎಂದು ಪ್ರಧಾನಿ ಮಾರ್ಕ್ ಕಾರ್ನಿಯವರು ಬುಧವಾರ ಪ್ರಕಟಿಸಿದರು.
ಕೆನಡಾ ಮುಂಬರುವ ಸೆಪ್ಟಂಬರ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಫೆಲೆಸ್ತೀನ್ ಅನ್ನು ಒಂದು ದೇಶವನ್ನಾಗಿ ವಿಧ್ಯುಕ್ತವಾಗಿ ಗುರುತಿಸಲಿದೆ.
ಕೆನಡಾ ಬಹಳ ಹಿಂದಿನಿಂದಲೂ ಇಸ್ರೇಲ್-ಫೆಲೆಸ್ತೀನ್ ವಿವಾದಕ್ಕೆ ದ್ವಿರಾಷ್ಟ್ರ ಪರಿಹಾರವನ್ನು ಬೆಂಬಲಿಸುತ್ತ ಬಂದಿದ್ದು, ಅದು ಇನ್ನು ಮುಂದೆ ಸಮರ್ಥನೀಯವಲ್ಲ ಎಂದು ಕಾರ್ನಿ ಹೇಳಿದರು.
ಫೆಲೆಸ್ತೀನ್ ಹೋರಾಟಗಾರರ ಗುಂಪು ಹಮಾಸ್‌ನಿಂದ ಇಸ್ರೇಲಿಗಳಿಗೆ ವ್ಯಾಪಕ ಬೆದರಿಕೆ ಮತ್ತು ಅದು ಇಸ್ರೇಲ್‌ನ ಅಸಿತ್ವದ ಹಕ್ಕನ್ನು ತಿರಸ್ಕರಿಸಿದ್ದರಿಂದ ದ್ವಿರಾಷ್ಟ್ರ ಪರಿಹಾರದ ನಿರೀಕ್ಷೆಯು ಮಸುಕಾಗಿದೆ. ಪಶ್ಚಿಮ ದಂಡೆ ಮತ್ತು ಜೆರುಸ್‌ಲೇಮ್‌ನಲ್ಲಿ ಇಸ್ರೇಲ್‌ನಿಂದ ಹೆಚ್ಚುತ್ತಿರುವ ವಸಾಹತು ನಿರ್ಮಾಣಗಳು, ಪಶ್ಚಿಮ ದಂಡೆಯ ಸ್ವಾಧೀನಕ್ಕೆ ಇಸ್ರೇಲ್ ಸಂಸತ್ತಿನ ಕರೆ ಮತ್ತು ಗಾಝಾದಲ್ಲಿ ಮಾನವೀಯ ದುರಂತವನ್ನು ತಡೆಯುವಲ್ಲಿ ಇಸ್ರೇಲ್‌ನ ವೈಫಲ್ಯವೂ ದ್ವಿರಾಷ್ಟ್ರ ಸಿದ್ಧಾಂತಕ್ಕೆ ಹಾನಿಯನ್ನುಂಟು ಮಾಡಿದೆ ಎಂದು ಕಾರ್ನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದ್ವಿ-ರಾಷ್ಟ್ರ ಪರಿಹಾರವನ್ನು ಕಾಪಾಡಿಕೊಳ್ಳುವುದು ಎಂದರೆ ಹಿಂಸೆ ಅಥವಾ ಭಯೋತ್ಪಾದನೆಗೆ ಬದಲಾಗಿ ಶಾಂತಿಯನ್ನು ಆಯ್ಕೆ ಮಾಡಿಕೊಳ್ಳುವ ಎಲ್ಲ ಜನರೊಂದಿಗೆ ನಿಲ್ಲುವುದು ಹಾಗೂ ಸುಭದ್ರ ಮತ್ತು ಸಮೃದ್ಧ ಭವಿಷ್ಯಕ್ಕಾಗಿ ಏಕೈಕ ಮಾರ್ಗಸೂಚಿಯಾಗಿ ಇಸ್ರೇಲ್ ಮತ್ತು ಫೆಲೆಸ್ತೀನ್‌ಗಳ ಶಾಂತಿಯುತ ಸಹಬಾಳ್ವೆಗಾಗಿ ಅವರ ಸ್ವಾಭಾವಿಕ ಬಯಕೆಯನ್ನು ಗೌರವಿಸುವುದು ಎಂದು ಹೇಳಿದ ಕಾರ್ನಿ, ಫೆಲೆಸ್ತೀನ್‌ಗೆ ಮಾನ್ಯತೆಯು ತಾನು ಆಡಳಿತ ಸುಧಾರಣೆಗಳನ್ನು ಕೈಗೊಳ್ಳುತ್ತೇನೆ ಮತ್ತು 2026ರಲ್ಲಿ ಹಮಾಸ್ ಅನ್ನು ಹೊರಗಿಟ್ಟು ಚುನಾವಣೆಗಳನ್ನು ನಡೆಸುವುದಾಗಿ ಫೆಲೆಸ್ತೀನ್ ಪ್ರಾಧಿಕಾರದ ಭರವಸೆಗಳನ್ನು ಆಧರಿಸಿದೆ ಎಂದು ಹೇಳಿದರು.
ಫೆಲೆಸ್ತೀನ್ ಪ್ರಾಧಿಕಾರವು ವಿಶ್ವಸಂಸ್ಥೆಯಲ್ಲಿ ಫೆಲೆಸ್ತೀನ್ ದೇಶವನ್ನು ಪ್ರತಿನಿಧಿಸುತ್ತದೆ.
ಅಕ್ಟೋಬರ್ 2023ರಲ್ಲಿ ಇಸ್ರೇಲ್ ಮೇಲೆ ದಾಳಿ ಸಂದರ್ಭದಲ್ಲಿ ಸೆರೆ ಹಿಡಿಯಲಾದ ಎಲ್ಲ ಒತ್ತೆಯಾಳುಗಳನ್ನು ಹಮಾಸ್ ತಕ್ಷಣ ಬಿಡುಗಡೆಗೊಳಿಸಬೇಕು ಎಂದು ಹೇಳಿರುವ ಕೆನಡಾ, ಹಮಾಸ್ ಶಸ್ತ್ರಾಸ್ತ್ರಗಳನ್ನು ತೊರೆಯಬೇಕು ಮತ್ತು ಫೆಲೆಸ್ತೀನ್‌ನ ಭವಿಷ್ಯದ ಆಡಳಿತದಲ್ಲಿ ಯಾವುದೇ ಪಾತ್ರವನ್ನು ವಹಿಸಬಾರದು ಎಂದೂ ಒತ್ತಿ ಹೇಳಿದೆ.
2025 ಮಾರ್ಚ್‌ವರೆಗೆ ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳ ಪೈಕಿ 147 ದೇಶಗಳು ಫೆಲೆಸ್ತೀನ್‌ಗೆ ಸಾರ್ವಭೌಮ ದೇಶ ಎಂದು ಮಾನ್ಯತೆಯನ್ನು ನೀಡಿವೆ. ಫೆಲೆಸ್ತೀನ್ 2012ರಿಂದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸದಸ್ಯನಲ್ಲದ ವೀಕ್ಷಕ ದೇಶವಾಗಿದೆ.
ಇತ್ತೀಚಿಗೆ ಬ್ರಿಟನ್ ಮತ್ತು ಫ್ರಾನ್ಸ್ ಕೂಡ ಫೆಲೆಸ್ತೀನ್‌ಗೆ ಒಂದು ದೇಶವಾಗಿ ಮಾನ್ಯತೆ ನೀಡುವುದಾಗಿ ಘೋಷಿಸಿದ್ದವು.