ನೇಪಾಳ | ಮಾಜಿ ಪ್ರಧಾನಿ ನಿವಾಸಕ್ಕೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಪತ್ನಿ ಮೃತ್ಯು
Update: 2025-09-09 21:29 IST
ಕಠ್ಮಂಡು : ನೇಪಾಳದಲ್ಲಿ ಹಿಂಸಾತ್ಮಕ ಪ್ರತಿಭಟನೆ ಮುಂದುವರಿದಿದೆ. ಮಾಜಿ ಪ್ರಧಾನಿ ಜಲನಾಥ್ ಖಾನಲ್ ಅವರ ನಿವಾಸಕ್ಕೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದರಿಂದ ಅವರ ಪತ್ನಿ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ದಲ್ಲುವಿನಲ್ಲಿನ ಮಾಜಿ ಪ್ರಧಾನಿ ಜಲನಾಥ್ ನಿವಾಸಕ್ಕೆ ಬೆಂಕಿ ಹಚ್ಚಿದಾಗ ಅವರ ಪತ್ನಿ ರಬಿ ಲಕ್ಷ್ಮಿ ಚಿತ್ರಾಕರ್ ಸುಟ್ಟ ಗಾಯಗಳಿಂದ ಗಂಭೀರವಾಗಿದ್ದರು. ಅವರನ್ನು ಕೀರ್ತಿಪುರ ಬರ್ನ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿರುವ ಬಗ್ಗೆ ವರದಿಯಾಗಿದೆ.
ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲಿನ ನಿಷೇಧವನ್ನು ತೆರವುಗೊಳಿಸಿರುವುದಾಗಿ ಸರಕಾರ ಘೋಷಿಸಿದರೂ ನೇಪಾಳದಲ್ಲಿ ಹಿಂಸಾತ್ಮಕ ಪ್ರತಿಭಟನೆ ಮುಂದುವರಿದಿತ್ತು. ಇದರಿಂದಾಗಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಅಧ್ಯಕ್ಷ ರಾಮ್ ಚಂದ್ರ ಪೌಡೆಲ್ ಕೂಡ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.