×
Ad

ಎಚ್-1ಬಿ ವೀಸಾಗೆ 90 ಲಕ್ಷ ರೂಪಾಯಿ; ಅಮೆರಿಕದ ಭಾರತೀಯರಿಗೆ ಮತ್ತೆ ಸಂಕಷ್ಟ

Update: 2025-09-20 09:23 IST

ವಾಷಿಂಗ್ಟನ್: ಅಮೆರಿಕದಲ್ಲಿ ಇಮಿಗ್ರೇಶನ್ ಮತ್ತು ವೀಸಾ ಬಗೆಗೆ ದೊಡ್ಡ ಕೂಗು ಕೇಳಿ ಬರುತ್ತಿರುವ ನಡುವೆಯೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್-1ಬಿ ವೀಸಾಗೆ ಒಂದು ಲಕ್ಷ ಡಾಲರ್ ಶುಲ್ಕವನ್ನು ಪ್ರಕಟಿಸಿದ್ದಾರೆ. ಶ್ವೇತಭವನದ ಹೊಸ ಘೋಷಣೆಯ ಪ್ರಕಾರ, ಹೊಸ ಆದ್ಯಾದೇಶದ ಅನ್ವಯ ಕಂಪನಿಗಳು ಎಚ್-1ಬಿ ವೀಸಾ ಪ್ರಾಯೋಜಕ ಅರ್ಜಿದಾರರಿಗೆ ಸುಮಾರು 90 ಲಕ್ಷ ರೂಪಾಯಿ ಅಂದರೆ ಒಂದು ಲಕ್ಷ ಡಾಲರ್ ಪಾವತಿಸಬೇಕಾಗುತ್ತದೆ.

ಶುಕ್ರವಾರ ತಮ್ಮ ಓವಲ್ ಆಫೀಸ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ ಅಧಿಕಾರಿಗಳು, ಕಂಪನಿಗಳು ಕರೆತರುವ ಅರ್ಜಿದಾರರು, ಅಮೆರಿಕನ್ ಉದ್ಯೋಗಿಗಳಿಂದ ಬದಲಾಯಿಸಲು ಸಾಧ್ಯವಾಗದ ಅತ್ಯಧಿಕ ಕೌಶಲ ಹೊಂದಿರುವುದನ್ನು ಇದು ಖಾತರಿಪಡಿಸುತ್ತದೆ ಎಂದು ಹೇಳಿದರು.

"ಅವರಿಗೆ (ಕಂಪನಿಗಳಿಗೆ) ಕೆಲಸಗಾರರು ಬೇಕು, ನಮಗೆ ಶ್ರೇಷ್ಠ ಕೆಲಸಗಾರರು ಬೇಕು. ಹೊಸ ಆದ್ಯಾದೇಶವು ಅಮೆರಿಕ ಹೊಸದಾಗಿ ಶ್ರೇಷ್ಠ ಕೆಲಸಗಾರರನ್ನು ಪಡೆಯಲು ಅನುಕೂಲವಾಗಲಿದೆ" ಎಂದು ಈ ಕುರಿತ ಆದೇಶಕ್ಕೆ ಶುಕ್ರವಾರ ಸಹಿ ಮಾಡಿದ ಟ್ರಂಪ್ ಹೇಳಿದರು.

ಎಚ್-1ಬಿ ವೀಸಾ ಅಮೆರಿಕದ ಅತ್ಯಧಿಕ ಬೇಡಿಕೆಯ ವೀಸಾ ಆಗಿದೆ. ಈ ಉದ್ಯೋಗ ವೀಸಾ ಮೂಲಕ ಸಾವಿರಾರು ಮಂದಿ ಭಾರತೀಯರು ಅಮೆರಿಕಕ್ಕೆ ಪ್ರವೇಶ ಪಡೆಯುತ್ತಾರೆ. ಇದನ್ನು ಕಂಪನಿಗಳು ಅದರಲ್ಲೂ ಮುಖ್ಯವಾಗಿ ಐಟಿ ಕಂಪನಿಗಳು ಪ್ರಾಯೋಜಿಸುತ್ತವೆ. ಈ ಹೊಸ ಆದೇಶವು ಅಮೆರಿಕನ್ ಉದ್ಯೋಗಿಗಳಿಗೆ ಅನುಕೂಲವಾಗಲಿದ್ದು, ಅತ್ಯಧಿಕ ಕೌಶಲ ಹೊಂದಿರುವ ಉದ್ಯೋಗಿಗಳನ್ನು ಮಾತ್ರ ಅಮೆರಿಕಕ್ಕೆ ಕರೆ ತರುವಂತೆ ಮಾಡುತ್ತದೆ.

"ಇದರಿಂದಾಗಿ ಯಾವುದೇ ಅಮೆರಿಕದ ಕಂಪನಿಗಳು ವಿದೇಶಿ ಉದ್ಯೋಗಿಗಳನ್ನು ಅಮೆರಿಕದಲ್ಲಿ ತರಬೇತಿಗೊಳಿಸುವುದು ಕಷ್ಟಸಾಧ್ಯವಾಗಲಿದೆ. ಸರ್ಕಾರಕ್ಕೆ 1 ಲಕ್ಷ ಡಾಲರ್ ಪಾವತಿಸಿ ಉದ್ಯೋಗಿಗಳನ್ನು ಹೊರದೇಶಗಳಿಂದ ಕರೆ ತರುವುದು ಕಾರ್ಯಸಾಧು ಎನಿಸುವುದಿಲ್ಲ. ನೀವು ತರಬೇತಿ ನೀಡುವುದಿದ್ದರೆ ನಮ್ಮ ನೆಲದ ವಿಶ್ವವಿದ್ಯಾನಿಲಯಗಳ ಹೊಸ ಪದವೀಧರರನ್ನು ತರಬೇತುಗೊಳಿಸಿ" ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News