ಅಮೆರಿಕದೊಂದಿಗಿನ ಪರಮಾಣು ಒಪ್ಪಂದದಿಂದ ರಶ್ಯ ನಿರ್ಗಮನ
► ಪರಮಾಣು ಸಬ್ ಮೆರಿನ್ ನಿಯೋಜಿಸುವ ಟ್ರಂಪ್ ಹೇಳಿಕೆಗೆ ಪ್ರತಿಕ್ರಮ
PC | REUTERS
ಮಾಸ್ಕೋ, ಆ.5: ರಶ್ಯದ ಬಳಿ ಪರಮಾಣು ಸಜ್ಜಿತ ಸಬ್ ಮೆರಿನ್ ನಿಯೋಜಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರಕ್ಕೆ ಪ್ರತಿಕ್ರಮವಾಗಿ ಸೋವಿಯತ್ ಒಕ್ಕೂಟ ಮತ್ತು ಅಮೆರಿಕ ನಡುವಿನ ಶೀತಲ ಯುದ್ಧ ಯುಗದ ಒಪ್ಪಂದ `ಮಧ್ಯಂತರ ಶ್ರೇಣಿಯ ಪರಮಾಣು ಪಡೆಗಳ (ಐಎನ್ಎಫ್) ಒಪ್ಪಂದದಿಂದ ನಿರ್ಗಮಿಸುವುದಾಗಿ ರಶ್ಯ ಘೋಷಿಸಿದೆ.
ಈ ಒಪ್ಪಂದಕ್ಕೆ 1987ರಲ್ಲಿ ಸೋವಿಯತ್ ಒಕ್ಕೂಟದ ನಾಯಕ ಮಿಖಾಯಿಲ್ ಗೊರ್ಬಚೆವ್ ಮತ್ತು ಅಮೆರಿಕ ಅಧ್ಯಕ್ಷ ರೊನಾಲ್ಡ್ ರೇಗನ್ ಸಹಿ ಹಾಕಿದ್ದರು. 500ರಿಂದ 5,500 ಕಿ.ಮೀ ವ್ಯಾಪ್ತಿಯ ನೆಲದಿಂದ ಉಡಾಯಿಸುವ ಪರಮಾಣು ಕ್ಷಿಪಣಿಗಳನ್ನು ತೊಡೆದುಹಾಕುವ ಉದ್ದೇಶದ ಒಪ್ಪಂದ ಇದಾಗಿದೆ. ಈ ಒಪ್ಪಂದವು ಕಡಿಮೆ ಮತ್ತು ಮಧ್ಯಮ ದೂರ ವ್ಯಾಪ್ತಿಯ ಪರಮಾಣು ಕ್ಷಿಪಣಿಗಳ ನಿಯೋಜನೆಯನ್ನು ನಿಷೇಧಿಸುವ ಮೂಲಕ ಯುರೋಪ್ ನಲ್ಲಿ ಪರಮಾಣು ಯುದ್ಧದ ಬೆದರಿಕೆಯನ್ನು ಕಡಿಮೆಗೊಳಿಸಿತ್ತು.
ರಶ್ಯವು ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ 2019ರಲ್ಲಿ(ಟ್ರಂಪ್ ಅವರ ಪ್ರಥಮ ಅವಧಿಯಲ್ಲಿ) ಅಮೆರಿಕವು ಒಪ್ಪಂದದಿಂದ ಹಿಂದೆ ಸರಿದಿತ್ತು. ಆದರೆ ರಶ್ಯ ಏಕಪಕ್ಷೀಯ (ಸ್ವಯಂ ಹೇರಿದ) ನಿಷೇಧ ಘೋಷಿಸಿತ್ತು ಮತ್ತು ಅಮೆರಿಕ ಪರಮಾಣು ಶಸ್ತ್ರಾಸ್ತ್ರಗಳನ್ನು ನಿಯೋಜಿಸಿದರೆ ಮಾತ್ರ ತಾನೂ ಪ್ರತಿಕ್ರಮ ಕೈಗೊಳ್ಳುವುದಾಗಿ ಹೇಳಿತ್ತು. ಇದೀಗ `ರಶ್ಯದ ಬಳಿ' ಸೂಕ್ತ ಪ್ರದೇಶದಲ್ಲಿ ಎರಡು ಪರಮಾಣು ಸಬ್ ಮೆರಿನ್ ಗಳನ್ನು ನಿಯೋಜಿಸುವಂತೆ ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿರುವುದಕ್ಕೆ ಪ್ರತಿಯಾಗಿ ಒಪ್ಪಂದದಿಂದ ನಿರ್ಗಮಿಸುವುದಾಗಿ ರಶ್ಯ ಘೋಷಿಸಿದೆ.
`ಯುರೋಪ್ ಮತ್ತು ಏಶ್ಯಾ ಪೆಸಿಫಿಕ್ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಕಡಿಮೆ ಮತ್ತು ಮಧ್ಯಮ ವ್ಯಾಪ್ತಿಯ ಕ್ಷಿಪಣಿಗಳ ನಿಯೋಜನೆಯ ಒಪ್ಪಂದದ ಮರುವಿಮರ್ಶೆಯನ್ನು ಅನಿವಾರ್ಯಗೊಳಿಸಿದೆ. ಅಮೆರಿಕ ನಿರ್ಮಿತ ಕಡಿಮೆ ದೂರ ವ್ಯಾಪ್ತಿಯ ಕ್ಷಿಪಣಿಗಳನ್ನು ಯುರೋಪ್ ಮತ್ತು ಏಶ್ಯಾ ಪೆಸಿಫಿಕ್ ವಲಯದಲ್ಲಿ ನಿಯೋಜಿಸುವತ್ತ ಬೆಳವಣಿಗೆಗಳು ಪ್ರಗತಿ ಹೊಂದಿರುವ ಕಾರಣ ಇದೇ ರೀತಿಯ ಶಸ್ತ್ರಾಸ್ತ್ರಗಳ ನಿಯೋಜನೆಯ ಮೇಲೆ ಏಕಪಕ್ಷೀಯ ನಿಷೇಧವನ್ನು ಮುಂದುವರಿಸುವ ಪರಿಸ್ಥಿತಿ ಉಳಿದಿಲ್ಲ' ಎಂದು ರಶ್ಯದ ವಿದೇಶಾಂಗ ಇಲಾಖೆಯನ್ನು ಉಲ್ಲೇಖಿಸಿ ಅಲ್ ಜಝೀರಾ ವರದಿ ಮಾಡಿದೆ.
►ನೇಟೋಗೆ ರಶ್ಯ ಎಚ್ಚರಿಕೆ
ಒಪ್ಪಂದದಿಂದ ಹಿಂದೆ ಸರಿಯಲು ನೇಟೋದ `ರಶ್ಯ ವಿರೋಧಿ ನೀತಿ' ಕಾರಣ ಎಂದು ರಶ್ಯದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೇವ್ ದೂಷಿಸಿದ್ದಾರೆ.
ಇದು ನಮ್ಮ ಎಲ್ಲಾ ವಿರೋಧಿಗಳೂ ಪರಿಗಣಿಸಬೇಕಾದ ವಾಸ್ತವ. ಮುಂದಿನ ಕ್ರಮಗಳನ್ನು ನಿರೀಕ್ಷಿಸಿ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.