×
Ad

ಮುಂದಿನ ವಾ ಟ್ರಂಪ್ ಜೊತೆ ಶಹಬಾಝ್, ಮುನೀರ್ ಮಾತುಕತೆ ಸಾಧ್ಯತೆ

ವಿಶ್ವಸಂಸ್ಥೆ ಸಾಮಾನ್ಯ ಸಭೆ ಸಂದರ್ಭ ಪಾಕ್ ನಾಯಕರ ಭೇಟಿ?

Update: 2025-09-16 21:45 IST

ಶಹಬಾಝ್ ಶರೀಫ್ | PC : PTI 

ಇಸ್ಲಾಮಾಬಾದ್,ಸೆ.16: ಪಾಕಿಸ್ತಾನದ ಪ್ರಧಾನಿ ಶಹಬಾಝ್ ಶರೀಫ್ ಹಾಗೂ ಸೇನಾ ವರಿಷ್ಠ ಫೀಲ್ಡ್ ಮಾರ್ಶಲ್ ಆಸೀಮ್ ಮುನೀರ್ ಅವರು ಮುಂದಿನ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಪಾಕಿಸ್ತಾನದ ಈ ಉಭಯ ನಾಯಕರು ಟ್ರಂಪ್ ಜೊತೆ ಮಾತುಕತೆ ನಡೆಸಲಿದ್ದಾರೆಂದು ಪಾಕಿಸ್ತಾನದ ಖೈಬರ್ ನ್ಯೂಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಪಾಕಿಸ್ತಾನದಲ್ಲಿ ಇತ್ತೀಚೆಗೆ ಸಂಭವಿಸಿದ ವಿನಾಶಕಾರಿ ಪ್ರವಾಹದಿಂದ ಹಿಡಿದು ಖತರ್ ಮೇಲೆ ಇಸ್ರೇಲ್ ನಡೆಸಿದ ದಾಳಿವರೆಗೆ ವಿವಿಧ ವಿಷಯಗಳು ಮಾತುಕತೆಯ ವೇಳೆ ಚರ್ಚೆಗೆ ಬರಲಿದೆ ಎಂದು ವರದಿ ಹೇಳಿದೆ.

ಈ ಉನ್ನತ ಮಟ್ಟದ ಮಾತುಕತೆಯಲ್ಲಿ ಭಾರತ ಹಾಗೂ ಪಾಕ್ ನಡುವಿನ ರಾಜತಾಂತ್ರಿಕ ಉದ್ವಿಗ್ನತೆ ವಿಷಯ ಕೂಡಾ ಮಾತುಕತೆಯಲ್ಲಿ ಒಳಪಡಲಿದೆ ಎಂದು ವರದಿ ಹೇಳಿದೆ.

ಆದಾಗ್ಯೂ ಈ ಇಬ್ಬರು ಪಾಕ್ ನಾಯಕರು ಹಾಗೂ ಅಮೆರಿಕ ಅಧ್ಯಕ್ಷರ ಸಂಭಾವ್ಯ ಮಾತುಕತೆಯ ಬಗ್ಗೆ ವಾಶಿಂಗ್ಟನ್‌ನಲ್ಲಿರುವ ಪಾಕ್ ರಾಯಭಾರಿ ಕಚೇರಿಯಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

ಅಸೀಮ್ ಮುನೀರ್ ಅವರು ಒಂದರ ಹಿಂದೆ ಇನ್ನೊಂದರಂತೆ ಎರಡು ಸಲ ಅಮೆರಿಕಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಈ ವರದಿ ಬಂದಿದೆ.

ಹಲವು ವರ್ಷಗಳ ರಾಜತಾಂತ್ರಿಕ ವಿರಸದ ಬಳಿಕ, ಜೂನ್‌ ನಲ್ಲಿ ಡೊನಾಲ್ಡ್ ಟ್ರಂಪ್ ಅವರು ಪಾಕ್ ಸೇನಾಧ್ಯಕ್ಷ ಆಸೀಮ್ ಮುನೀರ್ ಅವರನ್ನು ಶ್ವೇತಭವನಕ್ಕೆ ಆಮಂತ್ರಿಸಿ, ಉಭಯದೇಶಗಳ ನಡುವೆ ವ್ಯಾಪಾರ, ಆರ್ಥಿಕ ಬೆಳವಣಿಗೆ ಹಾಗೂ ಕ್ರಿಪ್ಟೊ ಕರೆನ್ಸಿ ವಿಚಾರವಾಗಿ ಚರ್ಚಿಸಿದ್ದರು.

ಇದಾದ ಕೆಲವು ದಿನಗಳ ಬಳಿಕ ಜುಲೈನಲ್ಲಿ ಟ್ರಂಪ್ ಆಡಳಿತವು ಪಾಕ್ ಜೊತೆ ವ್ಯಾಪಾರ ಒಪ್ಪಂದವನ್ನು ಏರ್ಪಡಿಸಿಕೊಂಡಿತ್ತು ಹಾಗೂ ಪಾಕಿಸ್ತಾನದಲ್ಲಿರುವ ಅಗಾಧವಾದ ತೈಲ ಹಾಗೂ ವಿರಳ ಖನಿಜಗಳ ನಿಕ್ಷೇಪವನ್ನು ಉತ್ಖನನ ಮಾಡಲು ನೆರವಾಗುವುದಾಗಿ ಘೋಷಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News