×
Ad

ಸೌದಿ ಅರೇಬಿಯ | 20 ವರ್ಷಗಳ ಕಾಲ ಕೋಮಾದಲ್ಲಿದ್ದ ʼನಿದ್ರೆಯಲ್ಲಿರುವ ರಾಜಕುಮಾರʼ ಅಲ್ ವಲೀದ್ ಬಿನ್ ಖಾಲಿದ್ ನಿಧನ

Update: 2025-07-19 23:58 IST

ಮಗ ಅಲ್ವಲೀದ್ ಬಿನ್ ಖಲೀದ್ ಬಿನ್ ತಲಾಲ್ ಅವರೊಂದಿಗೆ ರಾಜಕುಮಾರ ಖಲೀದ್ ಬಿನ್ ತಲಾಲ್ | Photo : saudigazette.com.sa

ರಿಯಾದ್, ಜುಲೈ 19: ಸೌದಿ ಅರೇಬಿಯಾದ ʼನಿದ್ರೆಯಲ್ಲಿರುವ ರಾಜಕುಮಾರʼ ಎಂದೇ ಕರೆಯಲ್ಪಡುತ್ತಿದ್ದ ರಾಜಕುಮಾರ ಅಲ್ವಲೀದ್ ಬಿನ್ ಖಲೀದ್ ಬಿನ್ ತಲಾಲ್ ಅವರು ಶನಿವಾರ ನಿಧನರಾದರು. ಸುಮಾರು 20 ವರ್ಷಗಳ ಕಾಲ ಕೋಮಾದಲ್ಲಿದ್ದ ಅವರು ಇಹಲೋಕ ತ್ಯಜಿಸಿದರು ಎಂದು ಅವರ ತಂದೆ ರಾಜಕುಮಾರ ಖಲೀದ್ ಬಿನ್ ತಲಾಲ್ ಅಧಿಕೃತವಾಗಿ ಘೋಷಿಸಿದ್ದಾರೆ.

2005 ರಲ್ಲಿ ಲಂಡನ್‌ ನಲ್ಲಿ ನಡೆದ ಭೀಕರ ರಸ್ತೆ ಅಪಘಾತದ ಪರಿಣಾಮವಾಗಿ ಅಲ್ ವಲೀದ್ ಬಿನ್ ಖಾಲಿದ್ ಕೋಮಾಕ್ಕೆ ಜಾರಿದ್ದರು. ಅಂದಿನಿಂದ ಇಂದಿನವರೆಗೆ ಅವರು ನಿರಂತರ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದರು. ಅಪಘಾತದ ವೇಳೆಯಲ್ಲಿ ಅವರು ಯುನೈಟೆಡ್ ಕಿಂಗ್ಡಮ್‌ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.

ಅಲ್ಪಕಾಲಿಕ ಚಲನೆಯ ಕೆಲವು ಚಿಹ್ನೆಗಳ ಹೊರತಾಗಿಯೂ, ಅವರಿಗೆ ಪ್ರಜ್ಞೆ ಮರಳಲೇ ಇಲ್ಲ. ಇವೆಲ್ಲದರ ನಡುವೆ, ರಾಜಕುಮಾರ ಖಾಲಿದ್ ತಮ್ಮ ಮಗನಿಗೆ ನೀಡಲಾಗಿದ್ದ ಜೀವರಕ್ಷಕ ಬೆಂಬಲವನ್ನು ತೆಗೆದುಹಾಕಲು ನಿರಾಕರಿಸಿದ್ದರು. "ಬದುಕು ಮತ್ತು ಮೃತ್ಯು ದೇವರ ಕೈಯಲ್ಲಿವೆ" ಎಂಬ ಧಾರ್ಮಿಕ ನಂಬಿಕೆಯೇ ಅವರಿಗೆ ಅಚಲವಾಗಿತ್ತು.

ʼನಿದ್ರೆಯಲ್ಲಿರುವ ರಾಜಕುಮಾರʼ ಎಂಬ ಹೆಸರಿನಲ್ಲಿ ಅವರ ಕುರಿತ ಸುದ್ದಿಗಳು, ವರದಿಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಗಮನ ಸೆಳೆದಿದ್ದವು. ಅಲ್ ವಲೀದ್ ಬಿನ್ ಖಾಲಿದ್ ಬಿನ್ ತಲಾಲ್ ಅವರ ಅಂತ್ಯಕ್ರಿಯೆಯು ರವಿವಾರ ರಿಯಾದ್‌ ನ ಇಮಾಮ್ ತುರ್ಕಿ ಬಿನ್ ಅಬ್ದುಲ್ಲಾ ಮಸೀದಿಯಲ್ಲಿ ಅಸರ್ ನಮಾಝಿನ ಬಳಿಕ ನಡೆಯಲಿದೆ ಎಂದು ರಾಜಕುಮಾರ ಖಾಲಿದ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News