ಭಾರತ ವಿರುದ್ಧದ ಸುಂಕಾಸ್ತ್ರ ಫಲ ನೀಡದು: ಅಮೆರಿಕಕ್ಕೆ ರಷ್ಯಾ ಎಚ್ಚರಿಕೆ
ಸೆರ್ಗೀ ಲಾವ್ರೋವ್ PC: x.com/mfa_russia
ಮಾಸ್ಕೊ: ಪ್ರಾಚೀನ ನಾಗರಿಕತೆಗಳಾದ ಭಾರತ ಮತ್ತು ಚೀನಾದಂಥ ದೇಶಗಳ ಮೇಲೆ ವಿಧಿಸಿರುವ ಸುಂಕಾಸ್ತ್ರ ಅಮೆರಿಕಕ್ಕೆ ಫಲ ನೀಡದು ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೀ ಲಾವ್ರೋವ್ ಅಮೆರಿಕದ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ರಷ್ಯಾದ ಪ್ರಮುಖ ಸುದ್ದಿವಾಹಿನಿ ಚಾನಲ್ 1 ಟಿವಿಯ ಗ್ರೇಟ್ ಗೇಮ್ ಕಾರ್ಯಕ್ರಮದಲ್ಲಿ ಮಾತನಾಡಿದ ಸೆರ್ಗಿ, ರಷ್ಯಾದಿಂದ ಇಂಧನ ಖರೀದಿ ಮಾಡುವುದನ್ನು ಸ್ಥಗಿತಗೊಳಿಸಬೇಕು ಎಂಬ ಅಮೆರಿಕದ ಬೇಡಿಕೆಯು, ಈ ದೇಶಗಳು ಬೇರೆ ಮೂಲದಿಂದ, ಹೊಸ ಇಂಧನ ಮಾರುಕಟ್ಟೆಯಿಂದ ಹೆಚ್ಚಿನ ಬೆಲೆಗೆ ಖರೀದಿಸುವಂತ ಮಾಡುತ್ತದೆ ಎಂದು ವಿಶ್ಲೇಷಿಸಿದ್ದಾರೆ.
ಉಕ್ರೇನ್ ಜತೆಗಿನ ಯುದ್ಧದಲ್ಲಿ ತೊಡಗಿರುವ ರಷ್ಯಾದಿಂದ ಭಾರತ ಕಚ್ಚಾ ತೈಲ ಖರೀದಿ ಮಾಡುವುದನ್ನು ಸ್ಥಗಿತಗೊಳಿಸಬೇಕು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗ್ರಹಿಸಿದ ಬೆನ್ನಲ್ಲೇ ರಷ್ಯಾ ಸಚಿವರ ಹೇಳಿಕೆ ವಿಶೇಷ ಮಹತ್ವ ಪಡೆದಿದೆ.
"ಭಾರತ ಹಾಗೂ ಚೀನಾ ಪ್ರಾಚೀನ ನಾಗರೀಕತೆಗಳು. ಈ ದೇಶಗಳ ಜತೆ "ನಾನು ಇದನ್ನು ಇಷ್ಟಪಡುವುದಿಲ್ಲ; ಆದ್ದರಿಂದ ತೈಲ ಖರೀದಿ ನಿಲ್ಲಿಸಿ ಇಲ್ಲವೇ ನಿಮ್ಮ ಮೇಲೆ ಸುಂಕ ವಿಧಿಸುತ್ತೇನೆ" ಎಂಬ ಭಾಷೆ ಬಳಸುವುದರಿಂದ ಕಾರ್ಯಸಾಧನೆಯಾಗದು ಎಂದು ಸೆರ್ಗಿ ಅಣಕವಾಡಿದ್ದಾರೆ. ಅಮೆರಿಕ ಆಯ್ಕೆ ಮಾಡಿಕೊಂಡಿರುವ ಈ ನೀತಿಗೆ ನೈತಿಕ ಮತ್ತು ರಾಜಕೀಯ ವಿರೋಧವಿದೆ ಎಂದು ಅವರು ಸ್ಪಷ್ಟಪಡಿಸಿದರು.
ಅಮೆರಿಕದ ಈ ನೀತಿ ಈ ದೇಶಗಳ ಆರ್ಥಿಕ ಕಲ್ಯಾಣವನ್ನು ಕಡೆಗಣಿಸಿರುವ ಜತೆಗೆ ಗಂಭೀರ ತೊಡಕುಗಳನ್ನೂ ತಂದೊಡ್ಡಿದೆ. ಈ ದೇಶಗಳು ದುಬಾರಿ ಬೆಲೆ ತೆತ್ತು ಹೊಸ ಮಾರುಕಟ್ಟೆಯನ್ನು, ಹೊಸ ಮೂಲವನ್ನು ಹುಡುಕುವಂತ ಮಾಡಿದೆ ಎಂದು ಹೇಳಿದ್ದಾರೆ.