×
Ad

ಬೊಲಿವಿಯಾದಲ್ಲಿ ಸೇನೆಯ ದಂಗೆ ಯತ್ನ ವಿಫಲ | ಸೇನಾ ಮುಖ್ಯಸ್ಥರ ವಜಾ, ಬಂಧನ

Update: 2024-06-27 21:46 IST

 PC : theprint.in

ಸುಕ್ರೆ: ಬೊಲಿವಿಯಾದಲ್ಲಿ ದಂಗೆಗೆ ಪ್ರಯತ್ನಿಸಿದ ಸೇನಾ ಮುಖ್ಯಸ್ಥರನ್ನು ಬಂಧಿಸಲಾಗಿದ್ದು ದಂಗೆಯನ್ನು ವಿಫಲಗೊಳಿಸಲಾಗಿದೆ ಎಂದು ಅಧ್ಯಕ್ಷ ಲೂಯಿಸ್ ಎರ್ಕೆ ಹೇಳಿದ್ದಾರೆ.

ಆದರೆ ದಂಗೆ ನಡೆಸಲು ಅಧ್ಯಕ್ಷರೇ ಹೇಳಿದ್ದರು. ದಂಗೆಯನ್ನು ನಿಯಂತ್ರಿಸಿದಂತೆ ನಾಟಕವಾಡಿ ತನ್ನ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಅಧ್ಯಕ್ಷರು ಹೂಡಿದ ನಾಟಕ ಇದಾಗಿದೆ ಎಂದು ಪದಚ್ಯುತ ಸೇನಾ ಮುಖ್ಯಸ್ಥರು ಆರೋಪಿಸಿದ್ದಾರೆ.

ರಾಜಧಾನಿಯಲ್ಲಿನ ಪ್ರಮುಖ ಸರಕಾರಿ ಕಚೇರಿಗಳ ಎದುರು ನಿಯೋಜಿಸಲು ಟ್ಯಾಂಕ್‍ಗಳು ಹಾಗೂ ಯೋಧರನ್ನು ಸೇನಾ ಮುಖ್ಯಸ್ಥ ಜ| ಜುವಾನ್ ಜೋಸ್ ಝನಿಗಾ ಬುಧವಾರ ರವಾನಿಸಿದ್ದರು. ಅದರಂತೆ ತುಕಡಿಗಳು ಅಧ್ಯಕ್ಷರ ಭವನ ಹಾಗೂ ಸಂಸದ್ ಭವನಗಳಿರುವ ಐತಿಹಾಸಿಕ ಪ್ಲಾಝಾ ಮುರಿಲೊ ವೃತ್ತವನ್ನು ಪ್ರವೇಶಿಸಿದ್ದವು. ಒಂದು ಟ್ಯಾಂಕ್ ಅಧ್ಯಕ್ಷರ ಭವನದ ಎದುರಿದ್ದ ಲೋಹದ ಬಾಗಿಲನ್ನು ಮರಿದು ಒಳನುಗ್ಗಲು ಪ್ರಯತ್ನಿಸಿದೆ.

ಎಂಟು ಟ್ಯಾಂಕ್‍ಗಳು ಹಾಗೂ ಯೋಧರ ನಡುವೆ ಇದ್ದ (ಈಗ ವಜಾಗೊಂಡಿರುವ) ಸೇನಾ ಮುಖ್ಯಸ್ಥ ಝುನಿಗಾ `ಸಶಸ್ತ್ರ ಪಡೆಗಳು ಪ್ರಜಾಪ್ರಭುತ್ವವನ್ನು ಪುನರ್‍ರಚಿಸುವ ಉದ್ದೇಶವನ್ನು ಹೊಂದಿವೆ. ಸುಮಾರು 40 ವರ್ಷದಿಂದ ಒಬ್ಬರ ಆಳ್ವಿಕೆಯಲ್ಲಿರುವ ವ್ಯವಸ್ಥೆಯನ್ನು ನಿಜವಾದ ಪ್ರಜಾಪ್ರಭುತ್ವ ವ್ಯವಸ್ಥೆ ಮಾಡಲು ಬಯಸಿವೆ' ಎಂದು ಘೋಷಿಸಿದ್ದರು ಎಂದು ಎಎಫ್‍ಪಿ ಸುದ್ದಿಸಂಸ್ಥೆ ವರದಿಯಾಗಿದೆ.

ಕೆಲ ಹೊತ್ತಿನ ಬಳಿಕ ಪ್ಲಾಝಾ ವೃತ್ತದಿಂದ ಯೋಧರು ಮತ್ತು ಟ್ಯಾಂಕ್‍ಗಳು ಹಿಂದಕ್ಕೆ ಸರಿದಿವೆ. ಈ ಬಂಡಾಯ ಸುಮಾರು 5 ಗಂಟೆ ಮುಂದುವರಿದಿದೆ. ಬಳಿಕ ವರದಿಗಾರರ ಜತೆ ಮಾತನಾಡುತ್ತಿದ್ದ ಝುನಿಗಾರನ್ನು ಬಂಧಿಸಿ ಪೊಲೀಸ್ ವ್ಯಾನ್‍ನಲ್ಲಿ ಕುಳ್ಳಿರಿಸಿ ಕರೆದೊಯ್ಯಲಾಗಿದೆ. `ಜನರಲ್ ಝುನಿಗಾ ನಿಮ್ಮನ್ನು ಬಂಧಿಸಲಾಗಿದೆ. ನಾವು ಗಳಿಸಿರುವ ಪ್ರಜಾಪ್ರಭುತ್ವವನ್ನು ಯಾರೊಬ್ಬರೂ ನಮ್ಮಿಂದ ಕಸಿದುಕೊಳ್ಳಲಾಗದು' ಎಂದು ಸಹಾಯಕ ಆಂತರಿಕ ಸಚಿವ ಜಾನಿ ಅಗುಲೆರಾ ಘೋಷಿಸಿದರು.

ಇದಕ್ಕೂ ಮುನ್ನ ಅಧ್ಯಕ್ಷರ ಭವನದ ಬಾಲ್ಕನಿಯಿಂದ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ್ದ ಅಧ್ಯಕ್ಷ ಲೂಯಿಸ್ ಎರ್ಕೆ `ಪ್ರಜಾಪ್ರಭುತ್ವದ ಪರ ನಿಂತು ದಂಗೆಯನ್ನು ಸೋಲಿಸಲು ಬೊಲಿವಿಯಾದ ಜನತೆ ಒಗ್ಗೂಡಬೇಕಿದೆ' ಎಂದು ಕರೆ ನೀಡಿದ್ದರು. ದಂಗೆಯ ಪ್ರಯತ್ನ ವಿಫಲಗೊಂಡ ಬಳಿಕ ಸೇನಾ ಮುಖ್ಯಸ್ಥರ ಹುದ್ದೆಯಿಂದ ಝುನಿಗಾರನ್ನು ವಜಾಗೊಳಿಸಿ ನೂತನ ಮುಖ್ಯಸ್ಥರನ್ನು ನೇಮಕಗೊಳಿಸಿರುವುದಾಗಿ ಎರ್ಕೆ ಘೋಷಿಸಿದ್ದಾರೆ.

ಬಂಧನಕ್ಕೂ ಮುನ್ನ ವರದಿಗಾರರ ಜತೆ ಮಾತನಾಡಿದ್ದ ಝುನಿಗಾ `ದಂಗೆ ಏಳುವಂತೆ ಅಧ್ಯಕ್ಷರೇ ತನಗೆ ಹೇಳಿದ್ದರು. ದಂಗೆಯನ್ನು ಹತ್ತಿಕ್ಕುವ ನಾಟಕವಾಡಿ ತನ್ನ ಪ್ರತಿಷ್ಠೆ ಹೆಚ್ಚಿಸಿಕೊಳ್ಳುವ ಉದ್ದೇಶ ಅವರದ್ದಾಗಿತ್ತು' ಎಂದು ಆರೋಪಿಸಿದ್ದರು. ರವಿವಾರ ತನ್ನನ್ನು ಮಾತುಕತೆಗೆ ಅಧ್ಯಕ್ಷರು ಕರೆಸಿಕೊಂಡಿದ್ದು ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಲು ಏನಾದರೂ ಕೆಲಸ ಮಾಡುವಂತೆ ಸೂಚಿಸಿದ್ದರು. ಟ್ಯಾಂಕ್‍ಗಳ ಸಹಿತ ಯೋಧರನ್ನು ರಾಜಧಾನಿಗೆ ಕರೆತರುವಂತೆ ಅಧ್ಯಕ್ಷರೇ ಸೂಚಿಸಿದ್ದಾರೆ ಎಂದು ಝುನಿಗಾ ಹೇಳಿಕೆ ನೀಡಿದ್ದಾರೆ.

ಈ ಮಧ್ಯೆ, ದಂಗೆಯ ಸಂಚು ರೂಪುಗೊಳ್ಳುತ್ತಿದೆ ಎಂದು ಮಾಜಿ ಅಧ್ಯಕ್ಷ ಎವೊ ಮೊರೆಲ್ `ಎಕ್ಸ್' (ಟ್ವೀಟ್) ಮಾಡಿದ್ದರು ಮತ್ತು ಪ್ರಜಾಪ್ರಭುತ್ವದ ರಕ್ಷಣೆಗೆ ಜನತೆ ಒಗ್ಗೂಡಬೇಕು' ಎಂದು ಆಗ್ರಹಿಸಿದ್ದರು. ಹಲವು ವರ್ಷಗಳ ರಾಜಕೀಯ ಅಸ್ಥಿರತೆಯ ಬಳಿಕ ಬೊಲಿವಿಯಾ ರಾಜಕೀಯ ಆಳವಾಗಿ ಧ್ರುವೀಕರಣಗೊಂಡಿದೆ.

ಆಡಳಿತಾರೂಢ `ಮೂವ್ಮೆಂಟ್ ಟವಡ್ರ್ಸ್ ಸೋಷಿಯಾಲಿಸಮ್(ಎಂಎಎಸ್)' ಪಕ್ಷವು ಆಂತರಿಕ ಬಿಕ್ಕಟ್ಟು ಎದುರಿಸುತ್ತಿದ್ದು ಮಾಜಿ ಅಧ್ಯಕ್ಷ , ಬೊಲಿವಿಯಾದ ಪ್ರಥಮ ಬುಡಕಟ್ಟು ಅಧ್ಯಕ್ಷ ಮೊರೆಲ್ ಹಾಗೂ ಹಾಲಿ ಅಧ್ಯಕ್ಷ ಎರ್ಕೆ ಪಕ್ಷದ ಮೇಲೆ ಹಿಡಿತ ಸಾಧಿಸಲು ಪೈಪೋಟಿ ನಡೆಸುತ್ತಿದ್ದಾರೆ. 2019ರಲ್ಲಿ ಸಂವಿಧಾನವನ್ನು ಉಲ್ಲಂಘಿಸಿ ನಾಲ್ಕನೇ ಅವಧಿಗೆ ಅಧ್ಯಕ್ಷರಾಗಲು ಪ್ರಯತ್ನಿಸುವವರೆಗೆ ಅವರು ಭಾರೀ ಜನಪ್ರಿಯರಾಗಿದ್ದರು.

2019ರ ಚುನಾವಣೆಯಲ್ಲಿ ಮೊರೆಲ್ ಜಯ ಸಾಧಿಸಿದ್ದರೂ ಚುನಾವಣೆ ಅಕ್ರಮದ ಆರೋಪದ ಹಿನ್ನೆಲೆಯಲ್ಲಿ ದೇಶದಾದ್ಯಂತ ವ್ಯಾಪಕ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ್ದರು. 2020ರ ಚುನಾವಣೆಯಲ್ಲಿ ಎರ್ಕೆ ಗೆಲುವು ಸಾಧಿಸಿದ ಬಳಿಕ ದೇಶಕ್ಕೆ ಮರಳಿದ ನಂತರ ಮತ್ತೆ ಇಬ್ಬರು ಮುಖಂಡರ ನಡುವೆ ಅಧಿಕಾರಕ್ಕೆ ಸಂಘರ್ಷ ಮುಂದುವರಿದಿದೆ.

ಎರ್ಕೆ ಅವರ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಮಾದಕ ವಸ್ತು ಅಕ್ರಮ ಸಾಗಣೆ ದಂಧೆಗೆ ಪ್ರೋತ್ಸಾಹ ನೀಡುತ್ತಿದ್ದು ರಾಜಕೀಯವಾಗಿ ತನ್ನನ್ನು ಮೂಲೆಗುಂಪು ಮಾಡಲು ಪ್ರಯತ್ನಿಸುತ್ತಿದೆ ಎಂದು ಮೊರೆಲ್ ಆರೋಪಿಸುತ್ತಿದ್ದಾರೆ. 6 ತಿಂಗಳ ಹಿಂದೆ ಸಾಂವಿಧಾನಿಕ ಕೋರ್ಟ್ ಮೊರೆಲ್‍ರನ್ನು 2025ರ ಚುನಾವಣೆಯಿಂದ ಅನರ್ಹಗೊಳಿಸಿದ್ದರೂ ಎಂಎಎಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮೊರೆಲ್ ಶತಪ್ರಯತ್ನ ನಡೆಸುತ್ತಿದ್ದಾರೆ. ದಂಗೆಯ ಪ್ರಯತ್ನಕ್ಕೂ ಮುನ್ನ ಟಿವಿ ವಾಹಿನಿಯಲ್ಲಿ ಮಾತನಾಡಿದ್ದ ಜುವಾನ್ ಜೋಸ್ ಝನಿಗಾ `ಮೊರೆಲ್ ಮತ್ತೊಮ್ಮೆ ಚುನಾವಣೆಗೆ ನಿಂತರೆ ಅವರನ್ನು ಬಂಧಿಸುವುದಾಗಿ ಎಚ್ಚರಿಕೆ ನೀಡಿದ್ದರು.

*ನಿಕಟ ಗಮನ: ಅಮೆರಿಕ

ಬೊಲಿವಿಯಾದ ಬೆಳವಣಿಗೆಗಳನ್ನು ನಿಕಟವಾಗಿ ಗಮನಿಸಲಾಗುತ್ತಿದೆ ಎಂದು ಅಮೆರಿಕ ಸರಕಾರ ಹೇಳಿದ್ದು ಬೊಲಿವಿಯಾ ಜನತೆ ತಾಳ್ಮೆಯಿಂದ ಇರುವಂತೆ ಕರೆ ನೀಡಿರುವುದಾಗಿ ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರರು ಹೇಳಿದ್ದಾರೆ. ಸೇನೆಯ ನೇತೃತ್ವದಲ್ಲಿ ನಡೆದಿರುವ ದಂಗೆಯನ್ನು ಲ್ಯಾಟಿನ್ ಅಮೆರಿಕ ದೇಶಗಳಾದ ಚಿಲಿ, ಇಕ್ವೆಡಾರ್, ಪೆರು, ಮೆಕ್ಸಿಕೊ, ಕೊಲಂಬಿಯಾ ಮತ್ತು ವೆನೆಝುವೆಲಾದ ಮುಖಂಡರು ಖಂಡಿಸಿದ್ದು ಪ್ರಜಾಪ್ರಭುತ್ವವನ್ನು ಗೌರವಿಸುವಂತೆ ಆಗ್ರಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News