×
Ad

ಖಾಲಿಸ್ತಾನಿ ನಾಯಕನ ಹತ್ಯೆ ಪ್ರಕರಣದಲ್ಲಿ ಭಾರತದ ಕೈವಾಡದ ಆರೋಪ ಪುನರುಚ್ಚರಿಸಿದ ಟ್ರುಡೋ

Update: 2023-11-30 22:53 IST

ಸಾಂದರ್ಭಿಕ ಚಿತ್ರ (Photo: ANI)

ಒಟ್ಟಾವ : ಅಮೆರಿಕದ ನೆಲದಲ್ಲಿ ಸಿಖ್ಖ್ ಪ್ರತ್ಯೇಕತಾವಾದಿ ನಾಯಕನ ವಿಫಲ ಹತ್ಯೆ ಯತ್ನ ಪ್ರಕರಣದಲ್ಲಿ ಭಾರತದ ಪ್ರಜೆಯೊಬ್ಬರ ವಿರುದ್ಧ ಅಮೆರಿಕದ ಪ್ರಾಸಿಕ್ಯೂಟರ್ಗಳು ದೋಷಾರೋಪಣೆಯನ್ನು ಹೊರಿಸಿರುವುದು, ಹರದೀಪ್ ಸಿಂಗ್ ನಿಜ್ಜಾರ್ನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೆನಡಾ ಮಾಡಿರುವ ಆರೋಪವನ್ನು ಪುಷ್ಟೀಕರಿಸಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆಗ್ರಹಿಸಿದ್ದಾರೆ.

ಈ ವಿಷಯವನ್ನು ಭಾರತವು ಗಂಭೀರವಾಗಿ ಪರಿಗಣಿಸಬೇಕೆಂದು ಅವರು ಕರೆ ನೀಡಿದ್ದಾರೆ.

ಕೆನಡದ ಬ್ರಿಟಿಶ್ ಕೊಲಂಬಿಯಾ ಪ್ರಾಂತದಲ್ಲಿ ಜೂನ್ 18ರಂದು ನಡೆದ ಸಿಖ್ಖ್ ತೀವ್ರವಾದಿ ನಾಯಕ ನಿಜ್ಜಾರ್ ಅಪರಿಚಿತರ ಗುಂಡೇಟಿಗೆ ಬಲಿಯಾಗಿದ್ದನು. ನಿಜ್ಜಾರ್ ಹತ್ಯೆ ಪ್ರಕರಣದಲ್ಲಿ ಭಾರತ ಸರಕಾರ ಶಾಮೀಲಾಗಿದೆಯೆಂಬ ಆರೋಪಕ್ಕೆ ಸಂಬಂಧಿಸಿ ಕೆನಡದ ಅಧಿಕಾರಿಗಳು, ಅಮೆರಿಕನ್ ಸಹವರ್ತಿಗಳೊಂದಿಗೆ ಆಗಸ್ಟ್ ತಿಂಗಳಿನಿಂದ ನಿಕಟವಾಗಿ ಕಾರ್ಯಾಚರಿಸುತ್ತಿದ್ದಾರೆಂದು ಟ್ರುಡೋ ತಿಳಿಸಿದ್ದಾರೆ.

ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಭಾರತೀಯ ಮೂಲದ ಅಮೆರಿಕ ಪ್ರಜೆ, ಸಿಖ್ಖ್ ಪ್ರತ್ಯೇಕತಾವಾದಿ ನಾಯಕನೊಬ್ಬನನ್ನು ಹತ್ಯೆಗೈಯಲು ವಿಫಲ ಸಂಚು ನಡೆಸಿದ್ದಾನೆಂದು 52 ವರ್ಷ ವಯಸ್ಸಿನ ಭಾರತೀಯ ಪ್ರಜೆ ನಿಖಿಲ್ ಗುಪ್ತಾ ವಿರುದ್ಧ ಅಮೆರಿಕವು ದೋಷಾರೋಪಣೆ ಮಾಡಿದ ಬೆನ್ನಲ್ಲೆ ಟ್ರುಡೋ ಈ ಹೇಳಿಕೆಯನ್ನು ನೀಡಿದ್ದಾರೆ. ಹತ್ಯೆ ಸಂಚಿನ ಗುರಿ ಯಾರಾಗಿದ್ದರೆಂದು ಅಮೆರಿಕ ಬಹಿರಂಗಪಡಿಸಿಲ್ಲವಾದರೂ, ಆತ ಖಾಲಿಸ್ತಾನ್ ಪ್ರತ್ಯೇಕವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನೂನ್ ಎಂದು ಗುರುತಿಸಲಾಗಿದೆ.

‘‘ಅಮೆರಿಕದಿಂದ ಹೊರಬಂದಿರುವ ಸುದ್ದಿಯು, ನಾವು ಆರಂಭದಿಂದಲೇ ಏನನ್ನು ಹೇಳುತ್ತಾ ಬಂದಿದ್ದೇವೆಯೋ ಅದನ್ನು ಪುಷ್ಟೀಕರಿಸಿದೆ. ಈ ವಿಷಯವನ್ನು ಬಾರತವು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಳ್ಳಬೇಕಾಗಿದೆ. ಈ ಪ್ರಕರಣದ ಬುಡಕ್ಕೆ ತಲುಪಲು ನಮಗೆ ಭಾರತ ಸರಕಾರವು ನಮ್ಮೊಂದಿಗೆ ಕೆಲಸ ಮಾಡಬೇಕಿದೆ’’ ಎಂದು ಟ್ರುಡೋ ಹೇಳಿರುವುದಾಗಿ ಕೆನಡಿಯನ್ ಪ್ರೆಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

ನಿಜ್ಜಾರ್ ಸಿಂಗ್ ಕೊಲೆ ಪ್ರಕರಣವನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಕೆನಡದ ಪ್ರಜೆಗಳನ್ನು ಸುರಕ್ಷಿತವಾಗಿರಿಸುವುದು ನಮ್ಮ ಹೊಣೆಗಾರಿಕೆಯಾಗಿದೆ. ಅದನ್ನು ನಾವು ಮುಂದುವರಿಸಲಿದ್ದೇನೆ’’ಎಂದು ಟ್ರುಡೋ ಪ್ರತಿಪಾದಿಸಿದ್ದಾರೆ.

ಕೆನಡದಿಂದ ಭಾರತ ವಿರೋಧಿ ಶಕ್ತಿಗಳಿಗೆ ಆಶ್ರಯ :

ಟ್ರುಡೋ ಹೇಳಿಕೆಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು, ಕೆನಡದಲ್ಲಿ ಭಾರತ ವಿರೋಧಿ ಶಕ್ತಿಗಳು ನಡೆಸುತ್ತಿರುವ ಚಟುವಟಿಕೆಗಳು ಒಟ್ಟಾವದ ಜೊತೆಗಿನ ಮುಖ್ಯವಾದ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ.

ಕೆನಡವು ಭಾರತ ವಿರೋಧಿ ತೀವ್ರವಾದಿಗಳಿಗೆ ಹಾಗೂ ಹಿಂಸಾಚಾರಕ್ಕೆ ಸ್ಥಿರವಾಗಿ ಅವಕಾಶಗಳನ್ನು ನೀಡುತ್ತಾ ಬಂದಿದೆ. ಇದರಿಂದಾಗಿ ಕೆನಡದಲ್ಲಿರುವ ನಮ್ಮ ರಾಜತಾಂತ್ರಿಕ ಪ್ರತಿನಿಧಿಗಳು ಬವಣೆಯನ್ನು ಅನುಭವಿಸುತ್ತಾ ಬಂಧಿದ್ದಾರೆ’’ ಎಂದು ಬಾಗ್ಚಿ ಅವರು ಸುದ್ದಿಗೋಷ್ಠಿಯೊಂದರಲ್ಲಿ ತಿಳಿಸಿದ್ದಾರೆ.

ಅಮೆರಿಕದಲ್ಲಿನ ಬೆಳವಣಿಗೆಗಳ ಬಗ್ಗೆ ಕೆನಡದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಅವರು ಪ್ರತಿಕ್ರಿಯಿಸುತ್ತಾ, ಅಮೆರಿಕದಲ್ಲಿ ಏನು ನಡೆಯುತ್ತಿದೆಯೆಂಬ ಬಗ್ಗೆ ನಾನು ಏನನ್ನೂ ಹೇಳಲಾರೆ. ಆದರೆ ಕೆನಡಿಯನ್ ಪ್ರಜೆಯೊಬ್ಬರು ಕೆನಡದ ನೆಲದಲ್ಲಿ ಹತ್ಯೆಯಾಗಿರುವ ಘಟನೆಯಲ್ಲಿ ಭಾರತೀಯ ಏಜೆಂಟರುಗಳ ಕೈವಾಡವಿದೆಯೆಂಬ ವಿಶ್ವನೀಯ ಆರೋಪಗಳಿಗೆ ಕೆನಡ ಸರಕಾರದ ಬದ್ಧವಾಗಿದೆಯೆಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News