×
Ad

ಕ್ಸಿ ಜಿನ್ ಪಿಂಗ್- ಟ್ರಂಪ್ ಮಾತುಕತೆ : ಚೀನಾ ಸರಕುಗಳ ಸುಂಕದಲ್ಲಿ 10% ಕಡಿತಗೊಳಿಸಿದ ಅಮೆರಿಕ ಅಧ್ಯಕ್ಷ

ವಿರಳ ಭೂಖನಿಜಗಳ ರಫ್ತು ನಿಷೇಧ ರದ್ದುಗೊಳಿಸಿದ ಚೀನಾ

Update: 2025-10-30 19:25 IST

Photo | economictimes

ಸಿಯೋಲ್, ಅ.30: ದಕ್ಷಿಣ ಕೊರಿಯಾದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಜೊತೆ ನಡೆಸಿದ ಮುಖಾಮುಖಿ ಸಭೆಯನ್ನು `ರೋಚಕ ಯಶಸ್ಸು' ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಣ್ಣಿಸಿದ್ದು ಮುಂದಿನ ಮಾತುಕತೆಗಾಗಿ ಎಪ್ರಿಲ್‍ನಲ್ಲಿ ಚೀನಾಕ್ಕೆ ಭೇಟಿ ನೀಡುವುದಾಗಿ ಹೇಳಿದ್ದಾರೆ.

ವಿಶ್ವದ ಬಲಾಢ್ಯ ಶಕ್ತಿಗಳಾಗಿ ಚೀನಾ ಮತ್ತು ಅಮೆರಿಕಾ ಜೊತೆಯಾಗಿ ಜವಾಬ್ದಾರಿಗಳನ್ನು ಹೊರಬೇಕು. ಎರಡೂ ದೇಶಗಳು ಯಾವಾಗಲೂ ನೇರವಾಗಿ ಕಣ್ಣಲ್ಲಿ ಕಣ್ಣಿಟ್ಟು ನೋಡದಿದ್ದರೂ ಪಾಲುದಾರರು ಮತ್ತು ಸ್ನೇಹಿತರಾಗಿರಲು ಶ್ರಮಿಸಬೇಕು ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಸಭೆಯ ಬಳಿಕ ಹೇಳಿದ್ದಾರೆ. ಎರಡೂ ದೇಶಗಳ ಅಭಿವೃದ್ಧಿಗಾಗಿ ಉತ್ತಮ ವಾತಾವರಣ ನಿರ್ಮಿಸಲು ಟ್ರಂಪ್ ಜೊತೆಗೂಡಿ ಕಾರ್ಯ ನಿರ್ವಹಿಸಲು ತಾನು ಸಿದ್ಧ ಎಂದು ಕ್ಸಿ ಜಿನ್ ಪಿಂಗ್ ಘೋಷಿಸಿದ್ದಾರೆ.

ಅಮೆರಿಕಾ - ಚೀನಾ ನಡುವೆ ಮುಂದುವರಿದ ವ್ಯಾಪಾರ ಸಮರದ ನಡುವೆಯೇ ಕೊರಿಯಾದಲ್ಲಿ ಏಶಿಯಾ ಪೆಸಿಫಿಕ್ ಆರ್ಥಿಕ ಸಹಕಾರ ಶೃಂಗಸಭೆ(ಅಪೆಕ್)ನ ನೇಪಥ್ಯದಲ್ಲಿ ಉಭಯ ನಾಯಕರ ನಡುವೆ ನಡೆದ ಸಭೆಯ ಮುಖ್ಯಾಂಶಗಳು.

*ಚೀನಾದ ಸರಕುಗಳ ಮೇಲಿನ ಸುಂಕವನ್ನು ಅಮೆರಿಕಾ 10% ಕಡಿಮೆಗೊಳಿಸಲಿದೆ. ಫೆಂಟಾನಿಲ್(ನೋವು ನಿವಾರಕ ಔಷಧಿ) ಉತ್ಪಾದಿಸಲು ಬಳಸುವ ರಾಸಾಯನಿಕಗಳ ಮಾರಾಟಕ್ಕಾಗಿ ಚೀನಾದ ಮೇಲೆ ಶಿಕ್ಷೆಯಾಗಿ ಈ ವರ್ಷದ ಆರಂಭದಲ್ಲಿ ಜಾರಿಗೊಳಿಸಿದ್ದ 20% ಸುಂಕವನ್ನು 10%ಕ್ಕೆ ಇಳಿಸಲಾಗುವುದು. ಇದರಿಂದಾಗಿ ಚೀನಾದ ಮೇಲೆ ವಿಧಿಸುವ ಒಟ್ಟು ಸುಂಕಗಳ ಪ್ರಮಾಣ 47%ಕ್ಕೆ ಇಳಿಯುತ್ತದೆ(ಈಗ 57% ಇದೆ).

* ಚೀನಾವು ವಿರಳ ಖನಿಜಗಳ ರಫ್ತಿಗೆ ಅವಕಾಶ ಮಾಡುವ ಜೊತೆಗೆ ಅಮೆರಿಕಾದಿಂದ ಸೋಯಾಬೀನ್ಸ್ ಖರೀದಿಸಲಿದೆ. ವಿರಳ ಖನಿಜಗಳ ರಫ್ತಿಗೆ ಸಂಬಂಧಿಸಿ ಒಂದು ವರ್ಷದ ಒಪ್ಪಂದ.

* ಟಿಕ್‍ಟಾಕ್‍ಗೆ ಸಂಬಂಧಿಸಿದ ಸಮಸ್ಯೆಗಳನ್ನು ಸೂಕ್ತವಾಗಿ ಪರಿಹರಿಸಲು ಚೀನಾವು ಅಮೆರಿಕಾದೊಂದಿಗೆ ಕೆಲಸ ಮಾಡುತ್ತದೆ ಎಂದು ಚೀನಾದ ವಾಣಿಜ್ಯ ಸಚಿವಾಲಯ ಹೇಳಿದೆ.

* ಸಭೆಯಲ್ಲಿ ತೈವಾನ್ ವಿಷಯದ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಟ್ರಂಪ್ ಸ್ಪಷ್ಟನೆ.

* ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದ ವಿಷಯದಲ್ಲಿ ಜೊತೆಯಾಗಿ ಕೆಲಸ ಮಾಡಲು ಅಮೆರಿಕ-ಚೀನಾ ನಿರ್ಧಾರ.

ಸಂಭಾವ್ಯ ಇಂಧನ ಒಪ್ಪಂದದ ಬಗ್ಗೆ ಅಮೆರಿಕ-ಚೀನಾ ಅಧಿಕಾರಿಗಳ ಸಭೆ

ಎರಡೂ ರಾಷ್ಟ್ರಗಳ ನಡುವಿನ ಸಂಭಾವ್ಯ ಇಂಧನ ಒಪ್ಪಂದದ ಕುರಿತು ಚರ್ಚಿಸಲು ಅಮೆರಿಕಾ ಮತ್ತು ಚೀನಾದ ಅಧಿಕಾರಿಗಳು ಶೀಘ್ರವೇ ಸಭೆ ನಡೆಸಲಿದ್ದಾರೆ. ಅಮೆರಿಕಾದ ಇಂಧನ ಖರೀದಿಸುವ ಪ್ರಕ್ರಿಯೆಯನ್ನು ಆರಂಭಿಸಲು ಚೀನಾ ಸಮ್ಮತಿಸಿದೆ. ಇಂತಹ ಇಂಧನ ಒಪ್ಪಂದವನ್ನು ಕಾರ್ಯಗತಗೊಳಿಸಬಹುದೇ ಎಂದು ಪರಿಶೀಲಿಸಲು ಅಮೆರಿಕಾದ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ ನೇತೃತ್ವದ ಅಮೆರಿಕಾದ ನಿಯೋಗವು ಚೀನಾದ ಉನ್ನತ ನಿಯೋಗದ ಜೊತೆ ಮಾತುಕತೆ ನಡೆಸಲಿದೆ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಆರ್ಥಿಕ ಮತ್ತು ವ್ಯಾಪಾರ ವಿಷಯಗಳಲ್ಲಿ ಚೀನಾವು ಅಮೆರಿಕಾದೊಂದಿಗೆ ಒಮ್ಮತಕ್ಕೆ ತಲುಪಿದೆ. ಎರಡೂ ದೇಶಗಳ ಆರ್ಥಿಕ ಮತ್ತು ವ್ಯಾಪಾರ ತಂಡಗಳು ಮಹತ್ವದ ಆರ್ಥಿಕ ಮತ್ತು ವ್ಯಾಪಾರ ವಿಷಯಗಳ ಬಗ್ಗೆ ಆಳವಾದ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿವೆ ಮತ್ತು ಅವುಗಳನ್ನು ಪರಿಹರಿಸುವಲ್ಲಿ ಒಮ್ಮತಕ್ಕೆ ತಲುಪಿವೆ ಎಂದು ಕ್ಸಿ ಜಿನ್ ಪಿಂಗ್‌ರನ್ನು ಉಲ್ಲೇಖಿಸಿ `ಕ್ಸಿನ್‍ಹುವ' ಸುದ್ದಿಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News