×
Ad

ಚೀನಾ ಮೇಲೆ ಶೇ.50 ರಿಂದ 100 ರಷ್ಟು ಸುಂಕ ವಿಧಿಸಲು ನ್ಯಾಟೊ ದೇಶಗಳಿಗೆ ಟ್ರಂಪ್ ಕರೆ

Update: 2025-09-14 07:32 IST

ಡೊನಾಲ್ಡ್ ಟ್ರಂಪ್ (Photo: PTI)

ವಾಷಿಂಗ್ಟನ್: ರಷ್ಯಾ ಜತೆಗೆ ನಿಕಟ ನಂಟು ಹೊಂದಿರುವ ಚೀನಾದ ಮೇಲೆ ಶೇ.50 ರಿಂದ 100ರಷ್ಟು ಸುಂಕ ವಿಧಿಸುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನ್ಯಾಟೊ ಸದಸ್ಯ ದೇಶಗಳಿಗೆ ಕರೆ ನೀಡಿದ್ದಾರೆ.

ನ್ಯಾಟೊ ದೇಶಗಳು ತಮ್ಮ ಪ್ರಯತ್ನದಲ್ಲಿ ಕೈಜೋಡಿಸಿದರೆ, ಉಕ್ರೇನ್ ಜತೆಗಿನ ಸಂಘರ್ಷ ಕೊನೆಗೊಳ್ಳುವವರೆಗೆ ರಷ್ಯಾದ ಮೇಲೆ ಆರ್ಥಿಕ ದಿಗ್ಬಂಧನ ವಿಧಿಸುವ ಇಂಗಿತವನ್ನು ತಮ್ಮ ಟ್ರುಥ್ ಸೋಶಿಯಲ್‍ನಲ್ಲಿ ವ್ಯಕ್ತಪಡಿಸಿದ್ದಾರೆ.

ರಷ್ಯಾದಿಂದ ತೈಲ ಖರೀದಿಸುವ ಮೂಲಕ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿರುವ ಭಾರತದ ಬಗ್ಗೆ ಈ ಪೋಸ್ಟ್ ನಲ್ಲಿ ಯಾವುದೇ ಉಲ್ಲೇಖ ಮಾಡಿಲ್ಲ. "ಎಲ್ಲ ನ್ಯಾಟೊ ದೇಶಗಳು ಆರ್ಥಿಕ ನಿರ್ಬಂಧ ಹೇರಲು ಒಪ್ಪಿದರೆ ಮತ್ತು ರಷ್ಯಾದಿಂದ ತೈಲ ಖರೀದಿ ಸ್ಥಗಿತಗೊಳಿಸಿದರೆ ರಷ್ಯಾದ ಮೇಲೆ ದೊಡ್ಡ ನಿರ್ಬಂಧಗಳನ್ನು ವಿಧಿಸಲು ನಾನು ಸಿದ್ಧ" ಎಂದು ಹೇಳಿದ್ದಾರೆ.

ನ್ಯಾಟೊ ದೇಶಗಳು ಶೇ.50ರಿಂದ 100ರಷ್ಟು ಸುಂಕ ವಿಧಿಸುವಂತೆ ಕರೆ ನೀಡಿರುವ ಅವರು, ಉಕ್ರೇನ್ ಜತೆಗಿನ ಯುದ್ಧ ಕೊನೆಗೊಂಡ ಬಳಿಕ ಇದನ್ನು ಸಂಪೂರ್ಣ ಹಿಂದಕ್ಕೆ ಪಡೆಯಬಹುದು ಎಂದು ಸಲಹೆ ಮಾಡಿದ್ದಾರೆ.

ರಷ್ಯಾದಿಂದ ಇಂಧನ ಖರೀದಿಸುವ ದೇಶಗಳ ಮೇಲೆ ಸುಂಕ ಹೇರುವಂತೆ ಟ್ರಂಪ್ ಇತ್ತೀಚೆಗೆ ಯೂರೋಪಿಯನ್ ಒಕ್ಕೂಟದ ದೇಶಗಳ ಮೇಲೆ ಮತ್ತು ಜಿ7 ಮಿತ್ರದೇಶಗಳ ಮೇಲೆ ಒತ್ತಡ ತಂದಿದ್ದರು. ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ಇಚ್ಛಾಶಕ್ತಿ ಇದ್ದಲ್ಲಿ ಪಾಲುದಾರ ದೇಶಗಳು ಸುಂಕವನ್ನು ಜಾರಿಗೊಳಿಸಬೇಕು ಎಂದು ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಮತ್ತು ಅಮೆರಿಕದ ವ್ಯಾಪಾರ ಪ್ರತಿನಿಧಿ ಜೆಮಿಸನ್ ಗ್ರೀರ್ ಹೇಳಿಕೆ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News