ನೆತನ್ಯಾಹು ವಿರುದ್ಧದ ವಿಚಾರಣೆಗೆ ಟ್ರಂಪ್ ಆಘಾತ: ಕ್ಷಮಾದಾನಕ್ಕೆ ಆಗ್ರಹ
PC: x.com/AU_SIS
ವಾಷಿಂಗ್ಟನ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧದ ವಿಚಾರಣೆ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಘಾತ ವ್ಯಕ್ತಪಡಿಸಿದ್ದು, ಪ್ರಸ್ತಾವ ರದ್ದುಪಡಿಸುವಂತೆ ಅಥವಾ ನೆತನ್ಯಾಹು ಅವರಿಗೆ ಕ್ಷಮಾದಾನ ನೀಡುವಂತೆ ಆಗ್ರಹಿಸಿದ್ದಾರೆ.
"ಇಸ್ರೇಲ್ ನ ಸರ್ಕಾರ ಸರ್ವೋಚ್ಛ ಯುದ್ಧಕಾಲದ ಪ್ರಧಾನಿ ನೇತೃತ್ವದಲ್ಲಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಸರ್ಕಾರ ನೆತನ್ಯಾಹು ವಿರುದ್ಧ ಬೇಟೆಗೆ ಮುಂದಾಗಿರುವುದು ಆಘಾತ ತಂದಿದೆ. ಅತ್ಯಂತ ಕಠಿಣ ಯುದ್ಧದಲ್ಲಿ ಧೀರ್ಘಕಾಲದ ಶತ್ರುದೇಶ ಇರಾನ್ ವಿರುದ್ಧ ತಾಯ್ನೆಲದ ಮೇಲಿನ ಅತೀವ ಪ್ರೀತಿಯಿಂದ ಇನ್ನಷ್ಟು ಉತ್ತಮ, ತೀಕ್ಷ್ಣ ಅಥವಾ ಪ್ರಬಲ ದಾಳಿ ನಡೆಸುವುದು ಸಾಧ್ಯವಿರಲಿಲ್ಲ. ಬೇರೆ ಯಾರಾಗಿದ್ದರೂ ವ್ಯಾಪಕ ಹಾನಿ, ಮುಖಭಂಗ ಮತ್ತು ಅರಾಜಕತೆ ಸೃಷ್ಟಿಯಾಗುತ್ತಿತ್ತು!" ಎಂದು ಟ್ರಂಪ್ ಟ್ರುಥ್ ಸೋಶಿಯಲ್ ಪೋಸ್ಟ್ ನಲ್ಲಿ ಬಣ್ಣಿಸಿದ್ದಾರೆ.
ನೆತನ್ಯಾಹು ವೀರಯೋಧ; ಇಸ್ರೇಲ್ ನ ಇತಿಹಾಸದಲ್ಲೇ ಬಹುಶಃ ಇಂಥ ಯೋಧರು ಸಿಗಲಾರರು; ಇದರ ಫಲಿತಾಂಶವನ್ನು ಬಹುಶಃ ಯಾರು ಕಲ್ಪಿಸಿಕೊಂಡಿರಲೂ ಸಾಧ್ಯವಿಲ್ಲ. ವಿಶ್ವದಲ್ಲೇ ಪ್ರಬಲ ಅಣ್ವಸ್ತ್ರವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಶೀಘ್ರವೇ ಸಾಧ್ಯವಾಗಲಿದೆ! ಇಸ್ರೇಲ್ ನ ಉಳಿವಿಗಾಗಿ ಅಕ್ಷರಶಃ ನಾವು ಯುದ್ಧ ಸನ್ನಿವೇಶದಲ್ಲಿದ್ದೇವೆ. ಬಹುಶಃ ಇಸ್ರೇಲ್ ಇತಿಹಾಸದಲ್ಲೇ ನೆತನ್ಯಾಹು ಅವರಿಗಿಂತ ಹೆಚ್ಚು ಕಠಿಣವಾಗಿ ಮತ್ತು ಸಮಗ್ರವಾಗಿ ಯಾರೂ ಹೋರಾಡಿರಲಾರರು" ಎಂದು ಗುಣಗಾನ ಮಾಡಿದ್ದಾರೆ.
"ಇಷ್ಟಾಗಿಯೂ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ನೆತನ್ಯಾಹು ಅವರಿಗೆ ಸಮನ್ಸ್ ನೀಡಲಾಗಿದೆ ಎಂಬ ವಿಚಾರ ಆಘಾತ ತಂದಿದೆ. (2020ರ ಮೇ ತಿಂಗಳಿನಿಂದ ಅವರು ಭಯಾನಕ ಪ್ರಹಸನ ಎದುರಿಸುತ್ತಿದ್ದಾರೆ. ಇಸ್ರೇಲ್ ನ ಹಾಲಿ ಪ್ರಧಾನಿಯೊಬ್ಬರು ವಿಚಾರಣೆ ಎದುರಿಸುತ್ತಿರುವುದು ಇದೇ ಮೊದಲು). ಇವು ಅವರಿಗೆ ಹಾನಿ ಮಾಡುವ ಉದ್ದೇಶದ ರಾಜಕೀಯ ಪ್ರೇರಿತ ಆರೋಪಗಳು. ದೇಶಕ್ಕಾಗಿ ಅಂಥ ಕೊಡುಗೆ ನೀಡಿದ ವ್ಯಕ್ತಿಯ ಬೇಟೆ ನಿಜವಾಗಿಯೂ ಕಲ್ಪನೆಗೂ ನಿಲುಕದ್ದು. ದೇಶಕ್ಕಾಗಿ ನೀಡಿದ ಕೊಡುಗೆಗೆ ಅವರು ಇದಕ್ಕಿಂತ ಒಳ್ಳೆಯದಕ್ಕೆ ಅರ್ಹರು. ಈ ವಿಚಾರಣೆಯನ್ನು ತಕ್ಷಣ ರದ್ದುಮಾಡಬೇಕು ಅಥವಾ ಶ್ರೇಷ್ಠ ನಾಯಕನಿಗೆ ಕ್ಷಮಾದಾನ ನೀಡಬೇಕು" ಎಂದು ಆಗ್ರಹಿಸಿದ್ದಾರೆ.