ಅಮೆರಿಕದ ವಾಣಿಜ್ಯ ಸಚಿವರಿಂದ ಭಾರತದ ವಿರುದ್ಧ ಮೆತ್ತೆ ಬೆದರಿಕೆ | ಜೋಳ ಖರೀದಿಸಿ ಇಲ್ಲವೇ ಹೆಚ್ಚಿನ ಸುಂಕ ಎದುರಿಸಿ
ಅಮೆರಿಕದ ವಾಣಿಜ್ಯ ಸಚಿವ ಹೋವರ್ಡ್ ಲುಟ್ನಿಕ್ | PC : REUTERS
ವಾಷಿಂಗ್ಟನ್,ಸೆ.14: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಕುರಿತು ತನ್ನ ನಿಲುವನ್ನು ಮೃದುಗೊಳಿಸಿರುವಂತೆ ಕಂಡು ಬರುತ್ತಿದೆಯಾದರೂ ವ್ಯಾಪಾರ ವಿಷಯಗಳು ಮತ್ತು ರಷ್ಯಾದ ತೈಲಕ್ಕೆ ಸಂಬಂಧಿಸಿದಂತೆ ದೇಶದ ವಿರುದ್ಧ ಅವರ ದಾಳಿ ಮುಂದುವರಿದಿದೆ.
ಇತ್ತೀಚಿನ ಹೇಳಿಕೆಯಲ್ಲಿ ಅವರ ವಾಣಿಜ್ಯ ಸಚಿವ ಹೋವರ್ಡ್ ಲುಟ್ನಿಕ್ ಅವರು, ಅಮೆರಿಕದ ಕೃಷಿ ಉತ್ಪನ್ನಗಳಿಗೆ ತನ್ನ ಮಾರುಕಟ್ಟೆಯಲ್ಲಿ ಅವಕಾಶ ನೀಡದ್ದಕ್ಕಾಗಿ ಭಾರತವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ.
‘ದಿ ಆಕ್ಸಿಯಾಸ್ ಶೋ’ಗೆ ನೀಡಿದ ಸಂದರ್ಶನದಲ್ಲಿ ಲುಟ್ನಿಕ್, ಭಾರತವು 140 ಕೋಟಿ ಜನಸಂಖ್ಯೆಯನ್ನು ಹೊಂದಿದ್ದರೂ ಅಮೆರಿಕದಿಂದ ಒಂದು ಬುಷೆಲ್ ಜೋಳವನ್ನೂ ಖರೀದಿಸುವುದಿಲ್ಲ ಎಂದು ಕಿಡಿಕಾರಿದರು. ಭಾರತವು ಅಮೆರಿಕನ್ ಜೋಳವನ್ನು ಖರೀದಿಸಬೇಕು, ಇಲ್ಲದಿದ್ದರೆ ಹೆಚ್ಚಿನ ಸುಂಕಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಬುಷೆಲ್ ಹಳೆಯ ಅಳತೆ ಪ್ರಮಾಣವಾಗಿದ್ದು, ಒಂದು ಬುಷೆಲ್ 56 ಪೌಂಡ್ ಅಥವಾ ಸುಮಾರು 25.40 ಕೆ.ಜಿ.ಜೋಳವನ್ನು ಸೂಚಿಸುತ್ತದೆ.
ಟ್ರಂಪ್ ಆಡಳಿತವು ವಿಷಯವನ್ನು ತಪ್ಪಾಗಿ ನಿರ್ವಹಿಸುವ ಮೂಲಕ ಭಾರತ, ಕೆನಡಾ ಮತ್ತು ಬ್ರಝಿಲ್‌ನಂತಹ ಅಮೂಲ್ಯ ಮಿತ್ರದೇಶಗಳನ್ನು ಕಳೆದುಕೊಳ್ಳುತ್ತಿದೆಯೇ ಎಂಬ ಪ್ರಶ್ನೆಗೆ ಲುಟ್ನಿಕ್ ಉತ್ತರಿಸುತ್ತಿದ್ದರು.
ವ್ಯಾಪಾರ ಕೊರತೆಯ ಆಧಾರರಹಿತ ಹೇಳಿಕೆಯನ್ನು ಪುನರುಚ್ಚರಿಸಿದ ಅವರು,‘ಈ ದೇಶಗಳೊಂದಿಗೆ ಸಂಬಂಧವು ಏಕಪಕ್ಷೀಯವಾಗಿದೆ. ಅವರು ನಮಗೆ ಮಾರಾಟ ಮಾಡುತ್ತಾರೆ ಮತ್ತು ನಮ್ಮಿಂದ ಲಾಭವನ್ನು ಪಡೆದುಕೊಳ್ಳುತ್ತಾರೆ. ಆದರೆ ಅವರು ತಮ್ಮ ಆರ್ಥಿಕತೆಯಿಂದ ನಮ್ಮನ್ನು ನಿರ್ಬಂಧಿಸುತ್ತಾರೆ ’ ಎಂದು ಹೇಳಿದರು.
ಈ ಧೋರಣೆಗಾಗಿ ಅಮೆರಿಕವು ದುಬಾರಿ ಬೆಲೆಯನ್ನು ತೆರುತ್ತಿದೆ ಎಂದು ಸಂದರ್ಶಕ, ಆಕ್ಸಿಯೊಸ್ ನ ಸಹಸ್ಥಾಪಕ ಮೈಕ್ ಅಲೆನ್ ಹೇಳಿದಾಗ ಪ್ರತಿಕ್ರಿಯಿಸಿದ ಲುಟ್ನಿಕ್,‘ಅದು ಹೇಗೆ ನಾವು ದುಬಾರಿ ಬೆಲೆಯನ್ನು ತೆರುತ್ತಿದ್ದೇವೆ? ಅದು ಸಾಧ್ಯವಿಲ್ಲ. ಭಾರತವು ತಾನು 140 ಕೋ.ಜನಸಂಖ್ಯೆ ಹೊಂದಿರುವುದಾಗಿ ಕೊಚ್ಚಿಕೊಳ್ಳುತ್ತಿದೆ, ಹಾಗಿದ್ದೂ ಅದು ನಮ್ಮಿಂದ ಒಂದೇ ಒಂದು ಬುಷೆಲ್ ಜೋಳವನ್ನು ಏಕೆ ಖರೀದಿಸುವುದಿಲ್ಲ? ಅದು ನಮಗೆ ಎಲ್ಲವನ್ನೂ ಮಾರುತ್ತದೆ. ಆದರೆ ನಮ್ಮ ಜೋಳವನ್ನು ಖರೀದಿಸುವುದಿಲ್ಲ. ಅದು ಎಲ್ಲದಕ್ಕೂ ಸುಂಕ ವಿಧಿಸುತ್ತದೆ. ಹೀಗಾಗಿಯೇ ಸುಂಕವನ್ನು ತಗ್ಗಿಸಿ,ನಾವು ನಿಮ್ಮನ್ನು ನಡೆಸಿಕೊಳ್ಳುವ ರೀತಿಯಲ್ಲಿಯೇ ನೀವೂ ನಮ್ಮನ್ನು ನಡೆಸಿಕೊಳ್ಳಿ ಎಂದು ಅಧ್ಯಕ್ಷ ಟ್ರಂಪ್ ಹೇಳುತ್ತಿದ್ದಾರೆ. ನಾವು ಈಗ ವರ್ಷಗಳ ತಪ್ಪನ್ನು ಸರಿಪಡಿಸಬೇಕಿದೆ. ಹೀಗಾಗಿ ನಮ್ಮ ಸರಕುಗಳ ಮೇಲೆ ಸುಂಕಗಳು ತಗ್ಗಬೇಕು ಎಂದು ನಾವು ಬಯಸಿದ್ದೇವೆ’ ಎಂದು ಹೇಳಿದರು.
ಇದು ಅಧ್ಯಕ್ಷರ ಮಾದರಿ. ನೀವು ಅದನ್ನು ಒಪ್ಪಿಕೊಳ್ಳಿ. ಇಲ್ಲದಿದ್ದರೆ ವಿಶ್ವದ ಅತ್ಯಂತ ದೊಡ್ಡ ಗ್ರಾಹಕ ದೇಶದೊಂದಿಗೆ ವ್ಯವಹರಿಸುವುದು ನಿಮಗೆ ಕಷ್ಟವಾಗಲಿದೆ ಎಂದೂ ಲುಟ್ನಿಕ್ ಹೇಳಿದರು.
ಗಮನಾರ್ಹವಾಗಿ,ಅಮೆರಿಕದ ಕೃಷಿ ಮತ್ತು ಡೈರಿ ಉತ್ಪನ್ನಗಳಿಗೆ ತನ್ನ ಮಾರುಕಟ್ಟೆಯನ್ನು ಮುಕ್ತಗೊಳಿಸಲು ಭಾರತದ ನಿರಾಕರಣೆಯು ಉಭಯ ದೇಶಗಳ ನಡುವೆ ವ್ಯಾಪಾರ ಒಪ್ಪಂದಕ್ಕೆ ತಡೆಯಾಗುತ್ತಿರುವ ಪ್ರಮಖ ವಿಷಯವಾಗಿದೆ. ಈಗ ಅಮೆರಿಕದ ವಾಣಿಜ್ಯ ಸಚಿವರೂ ರಶ್ಯದ ತೈಲ ಮತ್ತು ಭಾರತದ ಅಧಿಕ ಸುಂಕವಲ್ಲದೆ ಅಮೆರಿಕದ ಕೃಷಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳದಿರುವದೂ ಟ್ರಂಪ್ ಸುಂಕಾಸ್ತ್ರಕ್ಕೆ ಕಾರಣವಾಗಿದೆ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.