ಇರಾನ್ ಮೇಲೆ ದಾಳಿ ನಡೆಸುವ ಮೂಲಕ ಅಮೆರಿಕ ನೀಡಿದ ಭರವಸೆಯನ್ನು ಈಡೇರಿಸಿದೆ: ಇಸ್ರೇಲ್ ಪ್ರಧಾನಿ ನೆತನ್ಯಾಹು
ಟೆಲ್ ಅವೀವ್: ಇರಾನಿನ ಪರಮಾಣು ನೆಲೆಗಳ ಮೇಲೆ ವಾಯು ದಾಳಿ ನಡೆಸುವ ಮೂಲಕ ಅಮೆರಿಕ ಇಸ್ರೇಲ್‌ಗೆ ನೀಡಿದ ಭರವಸೆಯನ್ನು ಈಡೇರಿಸಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ ಎಂದು Aljazeera ವರದಿ ಮಾಡಿದೆ.
ವಾರದ ಹಿಂದೆ ಇರಾನ್ ಮೇಲೆ ಇಸ್ರೇಲ್ ಅಪ್ರಚೋದಿತ ದಾಳಿಯನ್ನು ಪ್ರಾರಂಭಿಸಿದಾಗ ಅಲ್ಲಿನ ಪರಮಾಣು ನೆಲೆಗಳನ್ನು ನಾಶ ಮಾಡುವುದಾಗಿ ಅಮೆರಿಕ ಭರವಸೆ ನೀಡಿತ್ತು. ಇಸ್ರೇಲ್ ಮತ್ತು ಅಮೆರಿಕದ ಸಮನ್ವಯತೆಯಲ್ಲಿ, ಅಮೆರಿಕವು ಇರಾನ್‌ನ ಮೂರು ಪರಮಾಣು ನೆಲೆಗಳಾದ ಫೋರ್ಡೋ, ನಟಾಂಝ್ ಮತ್ತು ಇಸ್ಫಹಾನ್ ಮೇಲೆ ದಾಳಿ ಮಾಡಿತು ಎಂದು ನೆತನ್ಯಾಹು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.
"ಇರಾನ್ ಪರಮಾಣು ಯೋಜನೆಯ ಮೇಲೆ ವಾಯುದಾಳಿ ಮಾಡುವ ಮೂಲಕ, ಅಮೆರಿಕವು ಐಡಿಎಫ್ ಮತ್ತು ಮೊಸಾದ್‌ನ ದಾಳಿಗಳಿಗೆ ಹೆಚ್ಚು ತೀವ್ರತೆ ಮತ್ತು ಬಲ ನೀಡಿತು. ಇರಾನ್‌ನ ಪರಮಾಣು ಕಾರ್ಯಕ್ರಮವು ನಮ್ಮ ಅಸ್ತಿತ್ವಕ್ಕೆ ಬೆದರಿಕೆ ಹಾಕಿತು ಮತ್ತು ಇಡೀ ಪ್ರಪಂಚದ ಶಾಂತಿಗೆ ಅಪಾಯವನ್ನುಂಟುಮಾಡಿತ್ತು" ಎಂದು ನೆತನ್ಯಾಹು ಹೇಳಿದ್ದಾರೆ.
ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವ ಯೋಜನೆ ಇರಾನ್ ಮುಂದೆ ಇಲ್ಲ. ಆದರೆ ಇರಾನ್ ಪರಮಾಣು ಶಕ್ತಿ ಮತ್ತು ಸಂಶೋಧನೆಯನ್ನು ನಡೆಸಲಿದೆ ಎಂದು ಇರಾನಿನ ಅಧಿಕಾರಿಗಳು ಪದೇ ಪದೇ ಹೇಳುತ್ತಲೇ ಬಂದಿದ್ದಾರೆ.