ಮಾದಕವಸ್ತು ಕಳ್ಳಸಾಗಾಟದ ನೌಕೆ ಮೇಲೆ ಅಮೆರಿಕ ಮಿಲಿಟರಿ ದಾಳಿ: ಮೂವರು ಮೃತ್ಯು
PC: screengrab/truthsocial.com/@realDonaldTrump
ವಾಷಿಂಗ್ಟನ್: ಮಾದಕವಸ್ತು ಕಳ್ಳಸಾಗಾಣಿಕೆ ಮಾಡುತ್ತಿದ್ದ ವೆನೆಜುವೆಲಾ ಮೂಲದ ನೌಕೆ ಮೇಲೆ ಸೇನಾ ದಾಳಿ ನಡೆಸಲು ಆದೇಶಿಸಲಾಗಿದ್ದು, ಇದರ ಪರಿಣಾಮ ದೋಣಿಯಲ್ಲಿದ್ದ ಮೂವರು ಮೃತಪಟ್ಟಿದ್ದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದಾರೆ. ಈ ನೌಕೆ ನಿಯೋಜಿತ ಉಗ್ರಗಾಮಿಗಳಿಗೆ ಸೇರಿದ್ದಾಗಿದ್ದು, ಅಮೆರಿಕಕ್ಕೆ ಜಲಮಾರ್ಗದ ಮೂಲಕ ಮಾದಕವಸ್ತು ಕಳ್ಳಸಾಗಾಣಿಕೆ ಮಾಡುತ್ತಿದ್ದರು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
"ನನ್ನ ಆದೇಶದಂತೆ ಯುದ್ಧ ಕಾರ್ಯದರ್ಶಿಯವರು ಯುಎಸ್ ಸೌತ್‌ಕಾಮ್ ಪ್ರದೇಶದಲ್ಲಿ ಮಾದಕವಸ್ತು ಕಳ್ಳಸಾಗಾಣಿಕೆ ಮಾಡುತ್ತಿದ್ದ ನಿಯೋಜಿತ ಉಗ್ರಗಾಮಿ ಸಂಘಟನೆಯ ನಾವೆ ಮೇಲೆ ಮಾರಕ ಮಿಂಚಿನ ದಾಳಿ ನಡೆಸಿದೆ" ಎಂದು ಟ್ರಂಪ್ ಟ್ರುಥ್ ಸೋಶಿಯಲ್ ನಲ್ಲಿ ಪ್ರಕಟಿಸಿದ್ದಾರೆ.
ದಾಳಿ ನಡೆದ ಪ್ರದೇಶ ಅಂತರರಾಷ್ಟ್ರೀಯ ಜಲಪ್ರದೇಶವಾಗಿದ್ದು, ಈ ದಾಳಿಯ ವೇಳೆ ಅಮೆರಿಕದ ಪಡೆಗಳಿಗೆ ಯಾವುದೇ ಹಾನಿಯಾಗಿಲ್ಲ ಎಮದು ದೃಢಪಡಿಸಿದ್ದಾರೆ.
ಮಾದಕವಸ್ತು ಕಳ್ಳಸಾಗಾಣಿಕೆದಾರರು ಫೆಂಟನಿಲ್, ನರೋಟಿಕ್ಸ್ ಮತ್ತು ಇತರ ಕಾನೂನುಬಾಹಿರ ರಾಸಾಯನಿಕ ಮಾದಕ ದ್ರವ್ಯಗಳನ್ನು ಅಮೆರಿಕದಲ್ಲಿ ಮಾರಾಟ ಮಾಡುವುದು ಸ್ಥಗಿತಗೊಳಿಸಿ ಮತ್ತು ಅಮೆರಿಕನ್ನರ ವಿರುದ್ಧ ಹಿಂಸೆ ಮತ್ತು ಭಯೋತ್ಪಾದನೆ ಸ್ಥಗಿತಗೊಳಿಸಿ ಎಂದು ಟ್ರಂಪ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ದಾಳಿಯ ವಿಡಿಯೊವನ್ನು ಕೂಡಾ ಪೋಸ್ಟ್ ನಲ್ಲಿ ಸೇರಿಸಿದ್ದು, ಮಾದಕವಸ್ತು ಜಾಲದ ವಿರುದ್ಧ ತಮ್ಮ ಆಡಳಿತ ನಡೆಸುತ್ತಿರುವ ಹೋರಾಟದ ಪುರಾವೆ ಎಂದು ಬಣ್ಣಿಸಿದ್ದಾರೆ.
ಇತ್ತೀಚೆಗೆ ಅಮೆರಿಕ ಮತ್ತೆರಡು ವೆನೆಜುವೆಲಾ ಮೂಲದ ನೌಕೆಗಳ ಮೇಲೂ ದಾಳಿ ಮಾಡಿ 11 ಮಂದಿಯನ್ನು ಹತ್ಯೆ ಮಾಡಿತ್ತು. ಈ ವಾರದ ಆರಂಭದಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ಮೂವರು ಹತರಾಗಿದ್ದರು. ಅಮೆರಿಕನ್ನರಿಗೆ ವಿಷಪ್ರಾಶನ ಮಾಡಿಸುವ ಈ ದಂಧೆಯನ್ನು ನಿಲ್ಲಿಸಲು ಈ ಕ್ರಮ ಅಗತ್ಯ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.