×
Ad

ಅಮೆರಿಕದಿಂದ ಮತ್ತೆ ಸುಂಕ ಯುದ್ಧ: ಚೀನಾ ಸರಕುಗಳ ಮೇಲೆ ಶೇ. 100 ತೆರಿಗೆ

Update: 2025-10-11 08:58 IST

PC: x.com/MMinevich

ವಾಷಿಂಗ್ಟನ್: ಚೀನಾ ಅಪರೂಪದ ರೇರ್ ಅರ್ಥ್ ಖನಿಜಗಳ ರಫ್ತನ್ನು ನಿಷೇಧಿಸಿದ ಬೆನ್ನಲ್ಲೇ ಆ ದೇಶದ ಜತೆ ನೇರ ವ್ಯಾಪಾರ ಸಂಘರ್ಷಕ್ಕೆ ಇಳಿದಿರುವ ಅಮೆರಿಕ, ಚೀನಾದಿಂದ ಆಮದಾಗುವ ಎಲ್ಲ ಸರಕು ಮತ್ತು ಸೇವೆಗಳ ಮೇಲೆ ಶೇಕಡ 100ರಷ್ಟು ಸುಂಕ ವಿಧಿಸಿದೆ. ನೂತನ ಸುಂಕ ನವೆಂಬರ್ 1ರಿಂದ ಜಾರಿಗೆ ಬರಲಿದೆ.

"ಚೀನಾ ಈ ಹಿಂದೆಂದೂ ಕಂಡರಿಯದ ನಿರ್ಧಾರವನ್ನು ಕೈಗೊಂಡ ಹಿನ್ನೆಲೆಯಲ್ಲಿ ಚೀನಾದ ಮೇಲೆ ಅಮೆರಿಕ ಶೇಕಡ 100ರಷ್ಟು ಸುಂಕವನ್ನು ವಿಧಿಸುತ್ತಿದೆ. ಈ ಸುಂಕವನ್ನು ಈಗಾಗಲೇ ಪಾವತಿಸುತ್ತಿರುವ ಸುಂಕದ ಜತೆಗೆ ಹೆಚ್ಚುವರಿಯಾಗಿ ವಿಧಿಸಲಾಗುತ್ತದೆ" ಎಂದು ಟ್ರಂಪ್ ಟ್ರುಥ್ ಸೋಶಿಯಲ್ ನಲ್ಲಿ ಬಹಿರಂಗಪಡಿಸಿದ್ದಾರೆ.

ಇದಕ್ಕೂ ಮುನ್ನ ಚೀನಾದ ನಿರ್ಧಾರವನ್ನು ದ್ವೇಷಪೂರಿತ ಎಂದ ಅವರು, ರೇರ್ ಅರ್ಥ್ ಗೆ ಸಂಬಂಧಿಸಿದ ಉತ್ಪಾದನೆಯ ಎಲ್ಲ ಅಂಶಗಳ ಮೇಲೆ ನಿಯಂತ್ರಣ ಸಾಧಿಸುವ ಸಂಬಂಧ ವಿಶ್ವದ ಎಲ್ಲ ದೇಶಗಳಿಗೆ ಪತ್ರ ಬರೆದಿರುವ ಚೀನಾದ ಕ್ರಮವನ್ನು ಕಟುವಾಗಿ ಟೀಕಿಸಿದ್ದರು. ಇಡೀ ವಿಶ್ವವನ್ನು ಚೀನಾ ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಈ ತಿಂಗಳ ಕೊನೆಗೆ ದಕ್ಷಿಣ ಕೊರಿಯಾದಲ್ಲಿ ನಡೆಯುವ ಏಷ್ಯಾ ಫೆಸಿಫಿಕ್ ಆರ್ಥಿಕ ಸಹಕಾರ ಶೃಂಗದ ಸಂದರ್ಭದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿ ಮಾಡುವ ಯೋಜನೆಯನ್ನು ಕೂಡಾ ಟ್ರಂಪ್ ಪ್ರಕಟಿಸಿದ್ದಾರೆ. ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭೇಟಿ ರದ್ದುಪಡಿಸಲಾಗುತ್ತದೆಯೇ ಎಂದು ಕೇಳಲಾದ ಪ್ರಶ್ನೆಗೆ, "ಇಲ್ಲ; ರದ್ದುಪಡಿಸಿಲ್ಲ" ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News