×
Ad

ವೆನೆಝುವೆಲಾದ ನೊಬೆಲ್ ಪ್ರಶಸ್ತಿ |ವಿಜೇತೆ ಪ್ರಶಸ್ತಿ ಸ್ವೀಕರಿಸಲು ದೇಶವನ್ನು ತೊರೆದರೆ ದೇಶಭ್ರಷ್ಟರೆಂದು ಘೋಷಣೆ: ಸರಕಾರ

Update: 2025-11-22 22:01 IST

ಮರಿಯಾ ಕೊರಿನಾ ಮಚಾದೊ | Photo Credit : X

ಕ್ಯಾರಕಾಸ್, ನ.22: ನೊಬೆಲ್ ಶಾಂತಿ ಪ್ರಶಸ್ತಿ ಪಡೆದಿರುವ ವೆನೆಝುವೆಲಾದ ವಿಪಕ್ಷ ನಾಯಕಿ ಮರಿಯಾ ಕೊರಿನಾ ಮಚಾದೊ ಅಡಗುದಾಣದಿಂದ ಹೊರಬಂದು ಪ್ರಶಸ್ತಿ ಸ್ವೀಕರಿಸಲು ನಾರ್ವೆಗೆ ತೆರಳಿದರೆ ಅವರನ್ನು ದೇಶಭ್ರಷ್ಟರೆಂದು ಪರಿಗಣಿಸುವುದಾಗಿ ವೆನೆಝುವೆಲಾದ ಅಟಾರ್ನಿ ಜನರಲ್‍ರನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಓಸ್ಲೋದಲ್ಲಿ ಡಿಸೆಂಬರ್ 10ರಂದು ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ಮಚಾದೊ ಈ ಹಿಂದೆ ಆಸಕ್ತಿ ವ್ಯಕ್ತಪಡಿಸಿದ್ದರು. `ಹಲವಾರು ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಅವರು ವೆನೆಝುವೆಲಾದಿಂದ ಹೊರಗೆ ತೆರಳಿದರೆ ಪಲಾಯನ ಮಾಡಿದವರು ಎಂದು ಪರಿಗಣಿಸಲಾಗುತ್ತದೆ. ಮಚಾದೊ ವಿರುದ್ಧ `ಪಿತೂರಿ, ದ್ವೇಷದ ಪ್ರಚೋದನೆ, ಭಯೋತ್ಪಾದನೆ ಕೃತ್ಯಗಳ' ಆರೋಪವಿದೆ ಎಂದು ವೆನೆಝುವೆಲಾದ ಅಟಾರ್ನಿ ಜನರಲ್ ತರೆಕ್ ವಿಲಿಯಮ್ ಹೇಳಿದ್ದಾರೆ.

ವೆನೆಝುವೆಲಾದ `ಉಕ್ಕಿನ ಮಹಿಳೆ' ಎಂದು ಕರೆಯಲ್ಪಡುವ ಮಚಾದೊ(58 ವರ್ಷ) ಅಧ್ಯಕ್ಷೀಯ ಚುನಾವಣೆಗೆ ವಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿದ್ದರು. 2024ರ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸದಂತೆ ಅವರನ್ನು ನಿಷೇಧಿಸಿದ ಬಳಿಕ ಅಧ್ಯಕ್ಷ ನಿಕೋಲಸ್ ಮಡುರೊ ಗೆಲುವು ಸಾಧಿಸಿದ್ದರು. ಆದರೆ ಚುನಾವಣೆ ನ್ಯಾಯಸಮ್ಮತ ರೀತಿಯಲ್ಲಿ ನಡೆದಿಲ್ಲ ಎಂದು ಅಂತಾರಾಷ್ಟ್ರೀಯ ವೀಕ್ಷಕರು ಹೇಳಿದ್ದರು.

ನೋಬೆಲ್ ಪ್ರಶಸ್ತಿ ಪಡೆದಿರುವುದು ಮಡುರೊ ಆಡಳಿತದಿಂದ ತನಗೆ ಸಾಕಷ್ಟು ರಕ್ಷಣೆ ಒದಗಿಸಿದೆ ಎಂದು ಇತ್ತೀಚೆಗೆ ಮಚಾದೋ ಪ್ರತಿಕ್ರಿಯಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News