ಯುದ್ಧವು ಸಮಸ್ಯೆಗಳನ್ನು ಪರಿಹರಿಸುವುದಿಲ್ಲ; ನಿರ್ಬಂಧ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸುತ್ತದೆ: ಟ್ರಂಪ್ ಸುಂಕ ಬೆದರಿಕೆ ಚೀನಾದ ತೀಕ್ಷ್ಣ ಪ್ರತಿಕ್ರಿಯೆ
PC | REUTERS
ಲುಬ್ಜಾನ, ಸೆ.14: ಗಂಭೀರವಾದ ಸಮಸ್ಯೆಗಳನ್ನು ಶಾಂತಿ ಮಾತುಕತೆಯ ಮೂಲಕ ಪರಿಹರಿಸಬಹುದು ಎಂಬ ಸಿದ್ಧಾಂತಕ್ಕೆ ಚೀನಾ ಬದ್ಧವಾಗಿದೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ.
ರಶ್ಯದೊಂದಿಗೆ ನಿಕಟ ಸಂಬಂಧ ಹೊಂದಿರುವುದಕ್ಕೆ ಚೀನಾದ ಮೇಲೆ 50ರಿಂದ 100%ದವರೆಗೆ ಸುಂಕ ವಿಧಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇಟೊ ರಾಷ್ಟ್ರಗಳಿಗೆ ಕರೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ವಾಂಗ್ ಯಿ `ಯುದ್ಧಗಳು ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ ಮತ್ತು ನಿರ್ಬಂಧಗಳು ಸಮಸ್ಯೆಯನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತವೆ' ಎಂದು ಹೇಳಿರುವುದಾಗಿ `ಚೀನಾ ಡೈಲಿ' ವರದಿ ಮಾಡಿದೆ.
ಸ್ಲೊವೇನಿಯಾಕ್ಕೆ ಭೇಟಿ ನೀಡಿರುವ ಅವರು ಆ ದೇಶದ ಉಪಪ್ರಧಾನಿ ತಂಜಾ ಫಜೋನ್ ಜೊತೆ ಸಭೆ ನಡೆಸಿದ ಬಳಿಕ ರಾಜಧಾನಿ ಲುಬ್ಜಾನಾದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು.
`ಚೀನಾವು ಯುದ್ಧದಲ್ಲಿ ಅಥವಾ ಯುದ್ಧದ ಯೋಜನೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಗಂಭೀರ ಸಮಸ್ಯೆಗಳನ್ನು ಮಾತುಕತೆ ಅಥವಾ ರಾಜಕೀಯ ಪ್ರಕ್ರಿಯೆಯ ಮೂಲಕ ಇತ್ಯರ್ಥಗೊಳಿಸಬೇಕು ಎಂಬುದು ನಮ್ಮ ಅಚಲ ನಿಲುವಾಗಿದೆ. ಚೀನಾ ಭದ್ರತೆ ಮತ್ತು ಶಾಂತಿಯ ವಿಷಯಗಳಲ್ಲಿ ಅತ್ಯುತ್ತಮ ದಾಖಲೆ ಹೊಂದಿರುವ ಜವಾಬ್ದಾರಿಯುತ ರಾಷ್ಟ್ರವಾಗಿದೆ. ಬಹುಪಕ್ಷೀಯತೆಯನ್ನು ಉತ್ತೇಜಿಸುವ, ಬಹುಪಕ್ಷೀಯ ಕಾರ್ಯವಿಧಾನವನ್ನು ಬಲಪಡಿಸುವ ಮತ್ತು ವಿಶ್ವಸಂಸ್ಥೆಯ ಚಾರ್ಟರ್ ನ(ಸನದು) ತತ್ವಗಳನ್ನು ಜಂಟಿಯಾಗಿ ರಕ್ಷಿಸುವ ಅಗತ್ಯವಿದೆ' ಎಂದವರು ಪ್ರತಿಪಾದಿಸಿದ್ದಾರೆ. ಅಂತರಾಷ್ಟ್ರೀಯ ಪರಿಸ್ಥಿತಿ ಪ್ರಸ್ತುತ ಅವ್ಯವಸ್ಥೆ ಮತ್ತು ಸಂಘರ್ಷಗಳಿಂದ ಹೆಣೆದುಕೊಂಡಿರುವುದರಿಂದ ಚೀನಾ ಮತ್ತು ಯುರೋಪ್ ವೈರಿಗಳಾಗಬಾರದು, ಮಿತ್ರರಾಗಬೇಕು ಮತ್ತು ಒಬ್ಬರನ್ನೊಬ್ಬರು ಎದುರಿಸುವ ಬದಲು ಸಹಕರಿಸಬೇಕು. ಎರಡೂ ಕಡೆಯವರು ಇತಿಹಾಸ ಮತ್ತು ಜನರಿಗೆ ಪೂರೈಸಬೇಕಾದ ಜವಾಬ್ದಾರಿಗಳ ಕುರಿತು ಸರಿಯಾದ ಆಯ್ಕೆಗಳನ್ನು ಮಾಡಬೇಕಿದೆ' ಎಂದು ವಾಂಗ್ ಯಿ ಪ್ರತಿಪಾದಿಸಿರುವುದಾಗಿ ವರದಿಯಾಗಿದೆ.