×
Ad

ಎ.16ರಂದು ಕಲಬುರಗಿಯಲ್ಲಿ ವಿಭಾಗ ಮಟ್ಟದ ಬೃಹತ್ ಉದ್ಯೋಗ ಮೇಳ : ಡಾ.ಶರಣಪ್ರಕಾಶ್‌ ಪಾಟೀಲ್‌

Update: 2025-04-07 16:39 IST

ಕಲಬುರಗಿ : ಕಲಬುರಗಿ ನಗರದ ಕೆಸಿಟಿ ಇಂಜಿನೀಯರಿಂಗ್ ಕಾಲೇಜಿನ ಆವರಣದಲ್ಲಿ ಎ.16 ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆ ವರೆಗೆ ಕಲಬುರಗಿ ವಿಭಾಗದ ಬೃಹತ್‌ ಉದ್ಯೋಗ ಮೇಳ ಆಯೋಜಿಸಿದ್ದು, ಕಲ್ಯಾಣ ಕರ್ನಾಟಕದ ನಿರುದ್ಯೋಗ ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಲಾಭ ಪಡೆಯಬೇಕೆಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಲಶ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ಮನವಿ ಮಾಡಿದ್ದಾರೆ.

ಉದ್ಯೋಗ ಮೇಳ ಆಯೋಜನೆ ಹಿನ್ನೆಲೆಯಲ್ಲಿ ಸೋಮವಾರ ಕಲಬುರಗಿ ನಗರದ ಕೆ.ಸಿ.ಟಿ ಇಂಜಿನೀಯರಿಂಗ್ ಕಾಲೇಜಿಗೆ ಭೇಟಿ‌ ನೀಡಿ ಸ್ಥಳ ಪರಿಶೀಲನೆ ನಡೆಸಿದ ನಂತರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ರಾಜ್ಯಸಭೆ ವಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಆಗಮಿಸಲಿದ್ದಾರೆ ಎಂದರು.

ಬೆಂಗಳೂರಿನ 125 ಸೇರಿದಂತೆ ಹೈದರಾಬಾದ್‌, ಮುಂಬೈ ಹಾಗೂ ಸ್ಥಳೀಯ ಸುಮಾರು 216 ಕಂಪನಿಗಳು ಈಗಾಗಲೇ ಮೇಳದಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಂಡಿವೆ. ಇದುವರೆಗೆ ಸುಮಾರು 6 ಸಾವಿರ ಅಭ್ಯರ್ಥಿಗಳು ಸಹ ನೋಂದಣಿ ಮಾಡಿದ್ದು, 15 ಸಾವಿರ ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ ಎಂದರು.

ಯುವ‌ ನಿಧಿ ಯೋಜನೆಯಡಿ ರಾಜ್ಯದಾದ್ಯಂತ 2.50 ಲಕ್ಷ ನಿರುದ್ಯೋಗಿ ಯುವ ಸಮೂಹ ನೊಂದಣಿ ಮಾಡಿಕೊಂಡಿದ್ದು, ಇದರಲ್ಲಿ ಅರ್ಹ 1.75 ಲಕ್ಷ ಪದವಿ ಮತ್ತು ಡಿಪ್ಲೋಮಾ ಪದವೀಧರರಿಗೆ 1,500 ಮತ್ತು 3,000 ರೂ. ನಿರುದ್ಯೋಗ ಭತ್ಯೆ‌ ನೀಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಯುವ ನಿಧಿ ಯೋಜನೆಯಡಿ ನೊಂದಾಯಿತ 73 ಸಾವಿರ ಜನರಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಮಾಹಿತಿ ನೀಡಲಾಗಿದೆ. ನೋಂದಣಿ ಪ್ರಕ್ರಿಯೆ ನಿರಂತರವಾಗಿ ನಡೆಯಲಿದ್ದು, ಆನ್ ಲೈನ್ ಮೂಲಕ https://skillconnect.kaushalkar.com ನೊಂದಾಯಿಸಿಕೊಂಡು ಅಥವಾ ಅಂದೇ ನೇರವಾಗಿಯೂ ಮೇಳದಲ್ಲಿ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ ಎಂದರು.

ರಾಜ್ಯದಲ್ಲಿ ನಿರುದ್ಯೋಗ ನಿವಾರಣೆ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯು ನಿರಂತರವಾಗಿ ಈ ರೀತಿಯ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗುತ್ತಿದೆ. ಬೆಂಗಳೂರು, ಚನ್ನಪಟ್ಟಣ, ಗದಗನಲ್ಲಿ ಆಯೋಜಿಸಲಾಗಿತ್ತು. ವೃತ್ತಿಪರ ಕೌಶಲ್ಯ ಹೆಚ್ಚಿಸಲು ನಿರಂತರ ತರಬೇತಿ, ಕಾರ್ಯಾಗಾರ ಸಹ ಆಯೋಜಿಸಲಾಗುತ್ತಿದೆ. ಕಲಬುರಗಿ ಉದ್ಯೋಗ ಮೇಳಕ್ಕೆ ಪೂರಕವಾಗಿ ಸಂದರ್ಶನ, ಸಂವಹನ ಕೌಶಲ್ಯ ಹೆಚ್ಚಿಸಲು ಸಹ ಇಲ್ಲಿನ ಯುವಕರಿಗೆ ಕಾಲೇಜುವಾರು ಕಾರ್ಯಾಗಾರ ಆಯೋಜಿಸಿದ್ದು, ಇದರ ಲಾಭ ನಿರದ್ಯೋಗಿ ಸಮುದಾಯ ಪಡೆಯಬೇಕು ಎಂದರು.

ಆರೋಗ್ಯ ಸಂಸ್ಥೆಗಳಿಗೆ ಅಡಿಗಲ್ಲು, ಮೆಡಿಕಲ್ ಹಬ್ ಗೆ ಪೂರಕ :

ಎ.16 ರಂದು ಜಿಮ್ಸ್ ಆವರಣದ ಕ್ಯಾನ್ಸರ್ ಆಸ್ಪತ್ರೆ ಪಕ್ಕದ ಆವರಣದಲ್ಲಿ ನಡೆಯುವ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಗಣ್ಯರು 116 ಕೋಟಿ ರೂ. ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆಗೊಳಿಸುವುದಲ್ಲದೆ ಕಿದ್ವಾಯಿ ಆಸ್ಪತ್ರೆಯಲ್ಲಿನ ಅತ್ಯಾಧುನಿಕ ಬ್ರಾಕಿಥೆರಪಿ ಸೇವೆಗೆ ಚಾಲನೆ ನೀಡಲಿದ್ದಾರೆ.

ಇದಲ್ಲದೆ 92 ಕೋಟಿ ರೂ. ವೆಚ್ಚದ ತಾಯಿ ಮತ್ತು ಮಕ್ಕಳ ಅಸ್ಪತ್ರೆ, 92 ಕೋಟಿ ರೂ. ವೆಚ್ಚದ ಇಂದಿರಾ ಗಾಂಧಿ‌ ಮಕ್ಕಳ ಆಸ್ಪತ್ರೆಯ ಶಾಖೆ, 76 ಕೋಟಿ ರೂ.‌ ವೆಚ್ಚದ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ 200 ಹಾಸಿಗೆಯ ವಿಸ್ತರಣಾ ಕಟ್ಟಡ, 53 ಕೋಟಿ ರೂ. ವೆಚ್ಚದ ಜಿ.ಟಿ.ಟಿ.ಸಿ ಕಟ್ಟಡ, 21 ಕೋಟಿ ರೂ. ವೆಚ್ಚದ ಸರ್ಕಾರಿ ಐ.ಟಿ.ಐ(ಪುರುಷ) ಉನ್ನತ್ತಿಕರಣ ಕಾಮಗಾರಿ, 50 ಕೋಟಿ ರೂ. ವೆಚ್ಚದ ಅಲೈಡ್ ಹೆಲ್ತ್ ಸೈನ್ಸ್ ಸಂಸ್ಥೆ, 23 ಕೋಟಿ ರೂ. ವೆಚ್ಚದ ಆರೋಗ್ಯ ಭವನ ಹಾಗೂ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ ಆಡಿಟೋರಿಯಂ ಸಭಾಂಗಣ ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭ ಆಯೋಜಿಸಿದೆ. ಈ ಎಲ್ಲಾ ಕಾರ್ಯಕ್ರಮಗಳು ಕಲಬುರಗಿಯನ್ನು ಮೆಡಿಕಲ್ ಹಬ್ ಆಗುವ ನಮ್ಮ ಕನಸಿಗೆ ಪೂರಕವಾಗಿವೆ ಎಂದರು.

ಕರ್ನಾಟಕ ರೇಷ್ಮೆ‌ಅಭಿವೃದ್ದಿ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ಕಲಬುರಗಿ ಉತ್ತರ ಶಾಸಕಿ ಕನೀಜ್ ಫಾತಿಮಾ, ವಿಧಾನ ಪರಿಷತ್ ಶಾಸಕರಾದ ಚಂದ್ರಶೆಖರ ಪಾಟೀಲ, ಜಗದೇವ ಗುತ್ತೇದಾರ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಕೆ.ಸಿ.ಟಿ. ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿ ಫರಾಜ್ ಉಲ್‌ ಇಸ್ಲಾಂ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಎಂ.ಡಿ. ನಾಗರಾಜ, ಜಿ.ಟಿ.ಟಿ.ಸಿ ಎಂ.ಡಿ. ಡಾ.ದಿನೇಶಕುಮಾರ ವೈ.ಕೆ., ಸರ್ಕಾರಿ ಐ.ಟಿ.ಐ(ಪುರುಷ) ಪ್ರಾಂಶುಪಾಲ ಮುರಳಿದರ ರತ್ನಗಿರಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಅಬ್ದುಲ್ ಅಜೀಮ್, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಸೇರಿದಂತೆ‌ ಮುಂತಾದವರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News