×
Ad

ಆಳಂದ ಮತಗಳ್ಳತನ ಪ್ರಕರಣ | ಮತದಾರರ ಹೆಸರು ಅಳಿಸಲು ಪ್ರತಿ ಅರ್ಜಿಗೆ 80 ರೂ !

ಎಸ್‌ಐಟಿ ತನಿಖೆಯಿಂದ ಬಹಿರಂಗ : ವರದಿ

Update: 2025-10-23 14:13 IST

ಸಾಂದರ್ಭಿಕ ಚಿತ್ರ PC | PTI

ಕಲಬುರಗಿ : ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಹೆಸರು ಅಳಿಸಲು ಪ್ರತಿ ಮತಕ್ಕೆ 80 ರೂ. ನೀಡಲಾಗುತ್ತಿತ್ತು ಎಂಬ ಮಾಹಿತಿ ಎಸ್‌ಐಟಿ ತನಿಖೆಯಿಂದ ಬಹಿರಂಗಗೊಂಡಿದೆ. ಒಟ್ಟು 6,018 ಮತಗಳನ್ನು ಅಳಿಸಲಾಗಿದ್ದು, ಇದರ ಹಿಂದೆ ಸ್ಥಳೀಯ ಡೇಟಾ ಸೆಂಟರ್ ಮತ್ತು ಬಿಜೆಪಿ ನಾಯಕನ ಸಹಾಯಕರ ಕೈವಾಡವಿದೆ ಎಂದು indianexpress.com ವರದಿ ಮಾಡಿದೆ.

2023ರ ಚುನಾವಣೆಯಲ್ಲಿ ಮತ ಅಳಿಸುವ ಯತ್ನ ನಡೆದಿತ್ತು ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. 

2022 ಡಿಸೆಂಬರ್‌ ನಿಂದ 2023 ಫೆಬ್ರವರಿ ಅವಧಿಯಲ್ಲಿ ಮತ ಅಳಿಸುವಿಕೆಗಾಗಿ 6,018 ಅರ್ಜಿಗಳು ಸಲ್ಲಿಸಲ್ಪಟ್ಟಿದ್ದು, ಸುಮಾರು 4.8 ರೂ. ಲಕ್ಷ ಪಾವತಿಸಲಾಗಿದೆ ಎಂಬ ವಿಷಯ ಬೆಳಕಿಗೆ ಬಂದಿದೆ. ಕಲಬುರಗಿ ಜಿಲ್ಲಾ ಕೇಂದ್ರದಲ್ಲಿರುವ ಡೇಟಾ ಸೆಂಟರ್ ನಿಂದ ಈ ಅಳಿಸುವಿಕೆ ಅರ್ಜಿಗಳನ್ನು ಕಳುಹಿಸಲಾಗಿದೆ ಎಂದು ಎಸ್ಐಟಿ ಪತ್ತೆ ಮಾಡಿದೆ ಎಂದು ವರದಿಯಾಗಿದೆ.

ಎಸ್ಐಟಿಯು ಸೆ.26 ರಂದು ಔಪಚಾರಿಕವಾಗಿ ಸಿಐಡಿಯ ಸೈಬರ್ ಅಪರಾಧ ಘಟಕದಿಂದ ತನಿಖೆಯನ್ನು ವಹಿಸಿಕೊಂಡಿತು. ಮತ ಅಳಿಸುವಿಕೆ ಯತ್ನ ಬಯಲಿಗೆ ಬಂದಾಗ ಪ್ರಾಥಮಿಕ ತನಿಖೆಯಲ್ಲಿ ಸ್ಥಳೀಯ ಪೊಲೀಸರು ಮತ್ತು ಸೈಬರ್ ಅಪರಾಧ ಘಟಕ 2023ರಲ್ಲಿ ಸ್ಥಳೀಯ ನಿವಾಸಿ ಮುಹಮ್ಮದ್ ಅಶ್ಫಾಕ್ ಅವರು ಭಾಗಿಯಾಗಿರುವ ಬಗ್ಗೆ ಅನುಮಾನಗೊಂಡು ಪ್ರಶ್ನಿಸಿತ್ತು. ಆದರೆ, ನಂತರ ಅಶ್ಫಾಕ್ ಅವರು ನಿರಪರಾಧಿ ಎಂದು ಹೇಳಿಕೊಂಡು, ತಮ್ಮ ಬಳಿ ಇರುವ ಎಲೆಕ್ಟ್ರಾನಿಕ್ ಸಾಧನಗಳನ್ನು ಒಪ್ಪಿಸುವುದಾಗಿ ಭರವಸೆ ನೀಡಿದ ನಂತರ ಅವರನ್ನು ಬಿಡುಗಡೆ ಮಾಡಲಾಯಿತು.

ಎಸ್ಐಟಿ ಅ.17ರಂದು ಬಿಜೆಪಿ ನಾಯಕ ಸುಭಾಷ್ ಗುತ್ತೇದಾರ್, ಅವರ ಪುತ್ರರಾದ ಹರ್ಷಾನಂದ ಮತ್ತು ಸಂತೋಷ್, ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಮಲ್ಲಿಕಾರ್ಜುನ್ ಮಹಾಂತಗೋಲ್ ಅವರ ಮನೆಗಳಲ್ಲಿ ಶೋಧ ನಡೆಸಿದೆ. ಈ ವೇಳೆ ಅಧಿಕಾರಿಗಳು 7 ಲ್ಯಾಪ್‌ಟಾಪ್‌ಗಳು ಮತ್ತು ಹಲವು ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಕೋಳಿ ಸಾಕಣೆ ಕೇಂದ್ರದ ಕೆಲಸಗಾರರು ಹಾಗೂ ಪೊಲೀಸ್ ಅಧಿಕಾರಿಯ ಸಂಬಂಧಿಕರ ಹೆಸರಿನ 75 ಮೊಬೈಲ್‌ ನಂಬರ್‌ಗಳನ್ನು ಬಳಸಿಕೊಂಡು ಮತ ಅಳಿಸುವ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ವರದಿಯಾಗಿದೆ.

ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, ಅಳಿಸುವ ಅರ್ಜಿಗಳು ಮತದಾರರಿಗೇ ಗೊತ್ತಿಲ್ಲದೇ ಸಲ್ಲಿಸಲ್ಪಟ್ಟಿದ್ದವು. ಈ ಕುರಿತಾಗಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಪ್ರತಿಕ್ರಿಯೆ ನೀಡಿದ್ದು, “ಪಾಟೀಲ್ ಸಚಿವರಾಗಲು ಬಯಸುತ್ತಿದ್ದಾರೆ ಮತ್ತು ಈ ಆಧಾರ ರಹಿತ ಆರೋಪಗಳನ್ನು ಮಾಡುವ ಮೂಲಕ ರಾಹುಲ್ ಗಾಂಧಿಯವರಿಗೆ ಹತ್ತಿರವಾಗಲು ಪ್ರಯತ್ನಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.

ಪ್ರಕರಣದ ಕುರಿತು ಎಸ್‌ಐಟಿ ತನಿಖೆ ಮುಂದುವರೆದಿದೆ.





Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News