×
Ad

ಇಂದಿನಿಂದ(ಅ.15) ಕಲಬುರಗಿ-ಬೆಂಗಳೂರು ವಿಮಾನ ಹಾರಾಟ ಬಂದ್

ʼಪ್ರಯಾಣಿಕರ ಅಭಾವʼ ಕಾರಣ ಕೊಟ್ಟ ಸ್ಟಾರ್‌ ಏರ್‌ ಸಂಸ್ಥೆ

Update: 2025-10-15 17:27 IST

ಕಲಬುರಗಿ: ಕಲ್ಯಾಣ ಕರ್ನಾಟಕದ ಕೇಂದ್ರಬಿಂದುವಾಗಿರುವ ಕಲಬುರಗಿ ವಿಮಾನ ನಿಲ್ದಾಣದಿಂದ ಸ್ಟಾರ್‌ ಏರ್‌ ಸಂಸ್ಥೆಯಿಂದ ನೀಡುತ್ತಿದ್ದ ವಿಮಾನ ಸೇವೆಯನ್ನು ಇಂದಿನಿಂದ (ಅ.15ರಿಂದ) ಸ್ಥಗಿತಗೊಳಿಸುವ ಮೂಲಕ ಈ ಭಾಗದ ವಿಮಾನ ಪ್ರಯಾಣಿಕರಿಗೆ ನಿರಾಸೆ ಮೂಡಿಸಿದೆ.

ಕಲಬುರಗಿ ಮತ್ತು ಬೆಂಗಳೂರು ನಡುವೆ ನಿತ್ಯ ಸಂಚಾರ ಮಾಡುತ್ತಿದ್ದ ಸ್ಟಾರ್ ಏರ್ ವಿಮಾನ ಸೇವೆ 15ರಿಂದ ಸ್ಥಗಿತಗೊಳ್ಳುವುದರಿಂದ ಈ ನಿಲ್ದಾಣದಿಂದ ಯಾವುದೇ ವಿಮಾನ ಹಾರಾಟ ಇರುವುದಿಲ್ಲ. ಟಿಕೆಟ್‌ ಬುಕ್ಕಿಂಗ್‌ ಬಂದ್‌ ಮಾಡಲಾಗಿದ್ದು, ಇಲ್ಲಿನ ಸಿಬ್ಬಂದಿಗಳನ್ನು ಸಹ ಬೇರೆ ಕಡೆಗೆ ಶಿಫ್ಟ್‌ ಮಾಡಲಾಗುತ್ತಿದೆ ಎಂದು ಸ್ಟಾರ್ ಏರ್ಲೈನ್ಸ್ ಸಂಸ್ಥೆಯ ಮೂಲಗಳು ತಿಳಿಸಿವೆ.

2019ರ ನ.22ಕ್ಕೆ ಲೋಕಾರ್ಪಣೆಗೊಂಡಿರುವ ಕಲಬುರಗಿ ವಿಮಾನ ನಿಲ್ದಾಣ ಇಡೀ ಕಲ್ಯಾಣ ಕರ್ನಾಟಕದಲ್ಲಿ ಮೊದಲ ವಿಮಾನ ನಿಲ್ದಾಣ ಎಂದು ಹೆಸರಾಗಿತ್ತು. ಸ್ಟಾರ್‌ ಏರ್‌ ಸೇರಿ ಹಲವು ವಿಮಾನಗಳು ಸೇವೆ ನೀಡುತ್ತಿರುವುದರಿಂದ ಕಲಬುರಗಿಯಿಂದ ಬೆಂಗಳೂರು ಮತ್ತು ಮುಂಬಯಿ, ತಿರುಪತಿ, ಹೈದರಾಬಾದ್‌ ಹೋಗಲು ಈ ಭಾಗದ ಜನಪ್ರತಿನಿಧಿಗಳಿಗೆ, ವ್ಯಾಪಾರಿಗಳಿಗೆ ಅನುಕೂಲವಾಗಿತ್ತು. ಆ ಬಳಿಕ ಕೇವಲ ಸ್ಟಾರ್‌ ಏರ್‌ ಮಾತ್ರ ದಿನಾಲು ಸೇವೆ ನೀಡುತ್ತಿತ್ತು. ಅದು ಸಹ ಕೇವಲ ಕಲಬುರಗಿ-ಬೆಂಗಳೂರಿಗೆ ಸೇವೆ ಸಿಮೀತಗೊಳಿಸಿತ್ತು. ಮತ್ತೆ ಕಳೆದ ವರ್ಷ ಅಕ್ಟೋಬರ್‌ 1 ರಿಂದ ವಾರದಲ್ಲಿ ಮೂರು ದಿನ ಸೇವೆ ನೀಡಿ ಇದೀಗ ಅ.15 ರಿಂದ ಈ ಸೇವೆಯನ್ನು ಸಂಪೂರ್ಣ ಸ್ಥಗಿತಗೊಳಿಸಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

ವಿಮಾನ ಸೇವೆ ಸ್ಥಗಿತಗೊಂಡಿರುವುದರಿಂದ ಕಲಬುರಗಿ, ಯಾದಗಿರಿ ಜಿಲ್ಲೆಗಳಿಂದ ಜನಪ್ರತಿನಿಧಿಗಳು, ವ್ಯಾಪಾರಿಗಳು ಮತ್ತು ಅಧಿಕಾರಿಗಳು, ಜನ ಸಾಮಾನ್ಯರು ಬೆಂಗಳೂರಿಗೆ ಹೋಗಲು ತೊಂದರೆಯಾಗುತ್ತಿದೆ. ಇನ್ನೊಂದೆಡೆ ದೀಪಾವಳಿ ಹಬ್ಬದ ಹಿನ್ನೆಲೆ ರೈಲುಗಳ ಟಿಕೆಟ್‌ಗಳು ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ. ಇದರಿಂದ ಈ ವಿಮಾನ ಸೇವೆಯನ್ನೆ ನೆಚ್ಚಿಕೊಂಡಿರುವ ಪ್ರಯಾಣಿಕರಿಗೆ ತೊಂದರೆಯಾಗಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಪ್ರಿಯಾಂಕ್‌ ಖರ್ಗೆ, ಡಾ.ಶರಣಪ್ರಕಾಶ ಪಾಟೀಲ್‌, ಸಂಸದ ರಾಧಾಕೃಷ್ಣ ದೊಡ್ಡಮನಿ ಅವರ ತವರು ಜಿಲ್ಲೆಯಿಂದ ವಿಮಾನ ಸೇವೆ ಸ್ಥಗಿತಗೊಂಡಿರುವುದು ಅಚ್ಚರಿಯನ್ನುಂಟು ಮಾಡಿದೆ. ಈ ಭಾಗದ ಜನಪ್ರತಿನಿಧಿಗಳು ಇಲ್ಲಿಂದ ವಿಮಾನ ಸೇವೆ ಆರಂಭಕ್ಕೆ ಕೇಂದ್ರದ ಮೇಲೆ ಒತ್ತಡ ಹೇರಬೇಕಾಗಿರುವುದು ಅಗತ್ಯವಿದೆ.

ಸೇವೆ ‍ಸ್ಥಗಿತಕ್ಕೆ ಏನು ಕಾರಣ ? :

ಪ್ರಯಾಣಿಕರ ಕೊರತೆ ಎಂಬ ಕಾರಣಕ್ಕೆ ಸಂಸ್ಥೆಗೆ ಹಾನಿಯಾಗುತ್ತಿರುವುದರಿಂದ ನಿತ್ಯ ನೀಡುತ್ತಿದ್ದ ಸೇವೆಯನ್ನು ವಾರಕ್ಕೆ ಮೂರು ದಿನಕ್ಕೆ ಸಿಮೀತಗೊಳಿಸಿದ ಸ್ಟಾರ್‌ ಏರ್‌ ಸಂಸ್ಥೆ ಉಡಾನ್ ಯೋಜನೆ ಅಡಿಯಲ್ಲಿ ಬೀದರ್, ಶಿವಮೊಗ್ಗ ಹಾಗೂ ನಾಂದೇಡ್ ಹೊಸ ಮಾರ್ಗಗಳು ಮಂಜೂರಾದ ಹಿನ್ನೆಲೆಯಲ್ಲಿ, ಕಲಬುರಗಿಗೆ ನೀಡುತ್ತಿದ್ದ ವಿಮಾನ ಸೇವೆಯನ್ನು ಸ್ಥಗಿತಗೊಳಿಸಿ ಅಲ್ಲಿ ಸೇವೆ ನೀಡಲು ಒಪ್ಪಂದ ಮಾಡಿಕೊಂಡಿದೆ ಎನ್ನಲಾಗುತ್ತಿದೆ.

ಪ್ರಯಾಣಿಕರ ಕೊರತೆಯಿಂದಾಗಿ ಸಂಸ್ಥೆಗೆ ಹಾನಿಯಾಗುತ್ತಿರುವುದರಿಂದ ಅ.15 ರಿಂದ ಕಲಬುರಗಿ-ಬೆಂಗಳೂರಿಗೆ ನೀಡುತ್ತಿದ್ದ ಸ್ಟಾರ್‌ ಏರ್‌ ವಿಮಾನ ಸೇವೆ ‍ಸ್ಥಗಿತಗೊಳಿಸಲಿದೆ ಎಂದು ಸಂಸ್ಥೆ ತಿಳಿಸಿದೆ.

-ಮಹೇಶ ಚಿಲ್ಕಾ (ನಿರ್ದೇಶಕ, ಕಲಬುರಗಿ ವಿಮಾನ ನಿಲ್ದಾಣ)

ಕಲಬುರಗಿ ವಿಮಾನ ಸೇವೆಯಿಂದ ಸಂಸ್ಥೆಗೆ ಹಾನಿಯಾಗುತ್ತಿರುವುದರಿಂದ ಅ. 15 ರಿಂದ ಸೇವೆ ಸ್ಥಗಿತಗೊಳಿಸುತ್ತಿದೆ ಎಂದು ಸಂಸ್ಥೆಯವರು ಹೇಳಿದ್ದು, 2-3 ತಿಂಗಳಲ್ಲಿ ಇನ್ನೂ ಹೊಸದಾಗಿ 25 ವಿಮಾನಗಳು ಖರೀದಿಸಿದ ಬಳಿಕ ಇಲ್ಲಿಂದ ಪುನಃ ಸೇವೆ ನೀಡುವ ಕುರಿತು ಭರವಸೆ ನೀಡಿದ್ದಾರೆ. ಜೊತೆಗೆ ಇಂಡಿಗೋ ವಿಮಾನ ಸಂಸ್ಥೆಗೂ ಸೇವೆ ನೀಡಲು ಮನವಿ ಮಾಡಲಾಗಿದೆ. ಈ ಕುರಿತು ವಿಮಾನಯಾನ ಸಚಿವರ ಗಮನಕ್ಕೂ ತರಲಾಗಿದೆ.

-ರಾಧಾಕೃಷ್ಣ ದೊಡ್ಡಮನಿ, ಸಂಸದ, ಕಲಬುರಗಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News