ಕಲಬುರಗಿ| 40 ಗ್ರಾಂ. ಚಿನ್ನವನ್ನು ಆಟೋದಲ್ಲೇ ಬಿಟ್ಟು ಹೋದ ವೃದ್ಧೆ : 48 ಗಂಟೆಗಳಲ್ಲಿ ವಾರಸುದಾರರಿಗೆ ಹಿಂದಿರುಗಿಸಿದ ಪೊಲೀಸರು
ಕಲಬುರಗಿ: ವಯೋವೃದ್ಧರೊಬ್ಬರು ಚಿಕಿತ್ಸೆಗೆಂದು ಬಂದು ಆಟೋದಲ್ಲಿ 40 ಗ್ರಾಂ ಬಂಗಾರದ ಆಭರಣಗಳನ್ನು ಬಿಟ್ಟುಹೋದ ಬಳಿಕ 48 ಗಂಟೆಗಳಲ್ಲಿ ಆಟೋ ಚಾಲಕನನ್ನು ಪತ್ತೆ ಹಚ್ಚಿ ಆಭರಣಗಳನ್ನು ವಾರಸುದಾರರಿಗೆ ಹಿಂದುರುಗಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿದ್ಯಾನಗರ ವಾಟರ್ ಟ್ಯಾಂಕ್ ಹತ್ತಿರ ನಿವಾಸಿ ರತ್ನಾಬಾಯಿ ಅವರು ಆ.16 ರಂದು ಆಟೋ ಹತ್ತಿಕೊಂಡು ಜವಳಿ ಕಾಂಪ್ಲೇಕ್ಸ್ ಹತ್ತಿರದ ಖಾಸಗಿ ಆಸ್ಪತ್ರೆಯಲ್ಲಿ ಎಕ್ಸ್ ರೇ ಮಾಡಿಸುವ ಕಾರಣಕ್ಕಾಗಿ ಮೈಮೇಲಿನ ಆಭರಣಗಳನ್ನು ತೆಗೆದು ಚೀಲದಲ್ಲಿ ಹಾಕಿ ಆಟೋದಲ್ಲಿ ಇಟ್ಟಿದ್ದರು. ಇದೇ ಸಂದರ್ಭದಲ್ಲಿ ರತ್ನಾಬಾಯಿ ರವರ ಮಗಳಾದ ಡಾ.ಶಾರದಾ ಅವರು ತಮ್ಮ ತಂದೆಯನ್ನು ಮನೆಯಿಂದ ಕರೆದುಕೊಂಡು ಬರಲು ಅದೇ ಆಟೋದಲ್ಲಿ ವಿದ್ಯಾನಗರ ವಾಟರ್ ಟ್ಯಾಂಕ್ ಹತ್ತಿರವಿರುವ ತಮ್ಮ ಮನೆಗೆ ಆಟೋದಲ್ಲಿಟ್ಟಿದ್ದ ಬ್ಯಾಗ್‌ನ್ನು ಮರೆತು ಹೋಗಿದ್ದರು. ಮರಳಿ ಆಸ್ಪತ್ರೆಗೆ ಬಂದು ಚಿಕಿತ್ಸೆಯ ನಂತರ ರತ್ನಾಬಾಯಿ ರವರು ಆಭರಣಗಳಿದ್ದ ಬ್ಯಾಗ್ ಬಗ್ಗೆ ವಿಚಾರಿಸಿದಾಗ ಆಟೋದಲ್ಲಿ ಮರೆತಿರುವ ಬಗ್ಗೆ ಜ್ಞಾಪಿಸಿ ಸದರಿ ಮಾಹಿತಿಯನ್ನು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಅವರಿಗೆ ತಿಳಿಸಿದ್ದಾರೆ.
ಈ ಕುರಿತು ಪೊಲೀಸ್ ಕಮಿಷನರ್ ಅವರು, ಅಶೋಕ ನಗರ ಪೊಲೀಸ್ ಠಾಣೆ ಪಿ.ಐ ಅರುಣಕುಮಾರ ಹಾಗೂ ಸಂಚಾರಿ ಪೊಲೀಸ್ ಠಾಣೆ-01 ಪಿ.ಐ ಮಾಹಾಂತೇಶ ಪಾಟೀಲ್, ಸಿಬ್ಬಂದಿಯವರಾದ ಆಸಿಫ್ ಹೆಚ್.ಸಿ ರವರನ್ನೊಳಗೊಂಡ 2 ಪ್ರತ್ಯೇಕ ತಂಡಗಳನ್ನು ರಚಿಸಿ ಬ್ಯಾಗ್ ಅನ್ನು ಪತ್ತೆ ಹಚ್ಚಲು ಆದೇಶಿಸಿದ್ದಾರೆ.
ಆಟೋ ಸಂಚರಿಸಿದ ಮಾರ್ಗವನ್ನು ಸಿ.ಸಿ.ಟಿ.ವಿ ಫೂಟೆಜ್ ಮೂಲಕ ಮಾಹಿತಿ ಕಲೆ ಹಾಕಿದ ತನಿಖಾ ತಂಡವು ಆಟೋ ಚಾಲಕನನ್ನು ಪತ್ತೆ ಹಚ್ಚಿ ಸುಮಾರು 4,00,000 ರೂ. ಮೌಲ್ಯದ 40ಗ್ರಾಂ ಬಂಗಾರದ ಆಭರಣವನ್ನು ವಶಕ್ಕೆ ಪಡೆದುಕೊಂಡು ಖುದ್ದಾಗಿ ಪೊಲೀಸ್ ಕಮಿಷನರ್ ಅವರು ವಾರಸುದಾರರಿಗೆ ಹಿಂದಿರುಗಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.