×
Ad

ಕಲಬುರಗಿ | ವಸತಿ ನಿಗಮದ ಹಗರಣ ಸಿಬಿಐಗೆ ವಹಿಸಲಿ : ರಾಜಕುಮಾರ್ ಪಾಟೀಲ್ ತೆಲ್ಕೂರ್ ಆಗ್ರಹ

Update: 2025-06-24 16:13 IST

ಕಲಬುರಗಿ: ದುಡ್ಡು ಕೊಟ್ಟು ಮನೆ ಮಂಜೂರು ಮಾಡಲಾಗಿದೆ ಎನ್ನುವ ವಸತಿ ನಿಗಮದ ಹಗರಣವನ್ನು ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕೆಂದು ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ಆಗ್ರಹಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಗಮದಲ್ಲಿ ಭ್ರಷ್ಟಾಚಾರ ಆಗಿದೆ ಎನ್ನುವ ವಿಚಾರದಲ್ಲಿ ನೈತಿಕ ಹೊಣೆ ಹೊತ್ತು ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು, ಇಲ್ಲದಿದ್ದರೆ ಸಿಎಂ ಅವರು ಝಮೀರ್ ಅವರನ್ನು ಸಂಪುಟ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.

ಕಾಂಗ್ರೆಸ್ ಸರಕಾರ ಅಧಿಕಾರ ಬಂದಾಗಿನಿಂದ ಕಳೆದ 2 ವರ್ಷದಿಂದಲೂ ಭ್ರಷ್ಟಾಚಾರದಲ್ಲಿ ತೊಡಗಿದೆ. ಯಾವುದಾದರೂ ಭ್ರಷ್ಟಾಚಾರದ ಆರೋಪಗಳು ಹೊರ ಬಿದ್ದರೆ, ಅಂತಹವುಗಳನ್ನು ಮುಚ್ಚಿ ಹಾಕಲು ಸರಕಾರ ವಿಷಯಾಂತರದ ಅಂಶಗಳನ್ನು ಬಿಚ್ಚಿಡುತ್ತದೆ. ಎಸ್.ಸಿ ಎಸ್.ಟಿ ಹಣ, ವಾಲ್ಮೀಕಿ ನಿಗಮದ ಹಣ, ಮೂಡಾ ಹಗರಣ ಮಾಡಿರುವುದು ನೋಡಿದರೆ ಸರಕಾರ ಭ್ರಷ್ಟಾಚಾರದಿಂದ ಕೂಡಿದೆ ಎಂದರ್ಥ ಎಂದು ವಿವರಿಸಿದರು.

ಒಂದು ವೇಳೆ ಸಚಿವ ಝಮೀರ್ ಅಹ್ಮದ್ ಖಾನ್ ಅವರ ಸಚಿವ ಸ್ಥಾನವನ್ನು ವಜಾಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಅಶೋಕ್ ಬಗಲಿ, ಶಾಸಕ ಬಸವರಾಜ್ ಮತ್ತಿಮಡು, ಚಂದು ಪಾಟೀಲ್, ಮಹದೇವ ಬೆಳಮಗಿ, ಅಮರನಾಥ್ ಪಾಟೀಲ್, ಹರ್ಷಾ ಗುತ್ತೇದಾರ್, ಆನಂದ ಪಾಟೀಲ್, ಶರಣಗೌಡ ಪಾಟೀಲ ದೇವಂತಗಿ ಸೇರಿದಂತೆ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News